ಬೆಂಗಳೂರು| ಲೋಕಾಯುಕ್ತ ಅಧಿಕಾರಿ ಸೋಗಿನಲ್ಲಿ ಹಣ ವಸೂಲಿ: ಆರೋಪಿ ಸೆರೆ

Update: 2024-01-02 13:47 GMT

ಬೆಂಗಳೂರು: ಸಿನಿಮಾ ನೋಡಿ ಪ್ರೇರಣೆಗೊಂಡು ಲೋಕಾಯುಕ್ತ ಅಧಿಕಾರಿ ಎಂದು ಹೇಳಿ ಹಣಕ್ಕಾಗಿ ಬೇಡಿಕೆ ಇಟ್ಟು, ಸರಕಾರಿ ಅಧಿಕಾರಿಗಳು ಕೆಲಸ ಮಾಡದಂತೆ ಮಾನಸಿಕವಾಗಿ ತೊಂದರೆ ನೀಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ಆಂಧ್ರ ಪ್ರದೇಶ ಮೂಲದ ಶ್ರೀನಾಥ ರೆಡ್ಡಿ(34) ಎಂಬುವನನ್ನು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

 10ನೆ ತರಗತಿ ವ್ಯಾಸಂಗ ಮಾಡಿದ್ದ ಈತ, ಆಂಧ್ರದಲ್ಲೂ ಸರಕಾರಿ ನೌಕರರಿಗೆ ಇದೇ ರೀತಿ ಕರೆ ಮಾಡಿ ಬೆದರಿಸಿ ಹಣ ವಸೂಲಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಅನಾಮಧೇಯ ವ್ಯಕ್ತಿಯೊಬ್ಬ ಸರಕಾರಿ ಅಧಿಕಾರಿಯೊಬ್ಬರಿಗೆ ಮೊಬೈಲ್‍ನಿಂದ ಕರೆ ಮಾಡಿ ತಾನು ಲೋಕಾಯುಕ್ತ ಇನ್ಸ್ ಪೆಕ್ಟರ್ ಚಂದ್ರಶೇಖರ್ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡು, ನಮ್ಮ ಎಡಿಜಿಪಿ ಸಾಹೇಬರು ಮಾತನಾಡುತ್ತಾರೆ ಎಂದು ಹೇಳಿ ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಅರ್ಜಿ ಇರುತ್ತದೆ. ಅದನ್ನು ವಿಚಾರಣೆ ಮಾಡದೆ ಮುಕ್ತಾಯಗೊಳಿಸಬೇಕಾದರೆ ಹಣ ನೀಡಬೇಕಾಗುತ್ತದೆ ಎಂದು ಹೆದರಿಸಿದ್ದಾನೆ.

ನೀವು ಹಣ ಕೊಟ್ಟರೆ ಅರ್ಜಿಯನ್ನು ನಮ್ಮ ಟೆಕ್ನಿಕಲ್ ಟೀಮ್‍ನಿಂದ ವಿಚಾರಣೆ ನಡೆಸಿ ಬಿ-ರಿಪೋರ್ಟ್ ಸಲ್ಲಿಸಲಾಗುವುದು ಎಂದು ಹೇಳಿ ಹಣಕ್ಕಾಗಿ ಬೇಡಿಕೆ ಇಟ್ಟು ಸರಕಾರಿ ಅಧಿಕಾರಿಗಳು ಕೆಲಸ ಮಾಡದಂತೆ ಮಾನಸಿಕವಾಗಿ ತೊಂದರೆ ನೀಡುತ್ತಿದ್ದನು. ಈ ಅನಾಮಧೇಯ ವ್ಯಕ್ತಿಯ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ತನಿಖೆಯನ್ನು ಮುಂದುವರೆಸಿ ಅನಾಮಧೇಯ ವ್ಯಕ್ತಿಯ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ತಾನು ಸಿನಿಮಾದಿಂದ ಪ್ರೇರಣೆಗೊಂಡು ಈ ರೀತಿಯ ಅಪರಾಧ ಕೃತ್ಯಗಳನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ, ಎಡಿಜಿಪಿ ಕೇಶವರಾವ್ ಅವರ ಹೆಸರಿನಲ್ಲಿ ಸರಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಸಿ ಹಣ ವಸೂಲಿ ಮಾಡಲು ಪ್ರಯತ್ನಿಸಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಗೊತ್ತಾಗಿದೆ.

ಈತನ ವಿರುದ್ಧ ನಗರದಲ್ಲಿನ ಬೇಗೂರು, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಹೆಬ್ಬಗೋಡಿ, ಜಿಗಣಿ, ಸೂರ್ಯಸಿಟಿ, ಕೋಲಾರ ಟೌನ್‍ಗಳಲ್ಲಿ ಮನೆ ಕಳವು ಪ್ರಕರಣಗಳು ದಾಖಲಾಗಿರುತ್ತವೆ. ಬೆಂಗಳೂರು ನಗರ ಉಪಪೊಲೀಸ್ ಆಯುಕ್ತರು ಅಪರಾಧ-2 ಅವರ ಮಾರ್ಗದರ್ಶನದಲ್ಲಿ ಸಂಘಟಿತ ಅಪರಾಧ ದಳ(ಪೂರ್ವ) ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯನ್ನು ನಡೆಸಿ ಆರೋಪಿಯನ್ನು ಬಂಧಿಸಿದ್ದು, ಕ್ರಮ ಜರುಗಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News