ಕುವೆಂಪು ಅವರ ವೈಚಾರಿಕ ಚಿಂತನೆಗಳು ಪಸರಿಸಲಿ : ಡಾ.ಅಶ್ವತ್ಥನಾರಾಯಣ
ಬೆಂಗಳೂರು : ರಾಷ್ಟ್ರಕವಿ ಕುವೆಂಪು ಅವರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಗಳು ಪಸರಿಸಬೇಕು. ಹೀಗಾಗಿ ಅವರ ಚಿಂತನೆಗಳು ನಮ್ಮ ಶಿಕ್ಷಣದಲ್ಲಿ ಪಠ್ಯವಾಗಿ ರೂಪಿತವಾಗಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಮಲ್ಲೇಶ್ವರಂ ವೃತ್ತದಲ್ಲಿರುವ ಕುವೆಂಪು ಪುತ್ಥಳಿ ಮುಂಬಾಗ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪುರವರ 120ನೆ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುವೆಂಪು ವೈಚಾರಿಕ ಸಂದೇಶಗಳು ಸಮಾಜದಲ್ಲಿ ಇರುವ ತಾರತಮ್ಯಗಳನ್ನು ಹೋಗಲಾಡಿಸಿ ಶಾಂತಿ ನೆಲೆಸುವಂತಾಗಬೇಕು. ಆಗ ಮಾತ್ರ ಕವಿ ಕುವೆಂಪುರವರ ಸಾಹಿತ್ಯದ ಸಂದೇಶಗಳನ್ನು ಸಮಾಜದಲ್ಲಿ ನೆಲೆಯೂರಿಸಿದಂತಾಗುತ್ತದೆ. ಅದಕ್ಕೆ ಪೂರಕ ಕಾರ್ಯಕ್ರಮಗಳನ್ನು ಸಂಘ-ಸಂಸ್ಥೆಗಳು ಮತ್ತು ಸರಕಾರಗಳು ರೂಪಿಸಬೇಕು ಎಂದು ಅವರು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಎಚ್. ಶಿವರಾಮೇಗೌಡ ಮಾತನಾಡಿ, ರಾಷ್ಟ್ರಕವಿ ಕುವೆಂಪುರವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಮಾತನಾಡಿ, ಮನುಜಮತ ವಿಶ್ವಪಥ ಎಂದು ಹೇಳಿ ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ರಾಷ್ಟ್ರಕವಿ ಕುವೆಂಪುರವರು ತಮ್ಮ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳನ್ನು ಮತ್ತು ವೈಚಾರಿಕ ಚಿಂತನೆಗಳನ್ನು ಬಿತ್ತುವ ಮೂಲಕ ಜಗನ್ಮಾನ್ಯ ಸಾಹಿತಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷ ಶ್ರ.ದೇ.ಪಾಶ್ರ್ವನಾಥ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗೌಡಗೆರೆ ಮಾಯುಶ್ರೀ, ವರ್ಧಮಾನ ಕಳಸೂರು, ಎಂ.ನಾಗೇಶ್, ಮಾಗಡಿ ಗಿರೀಶ್, ಅರವಿಂದ್, ಶಿವಕುಮಾರ್, ವೇಣುಗೋಪಾಲ್, ಕನ್ನಡಪರ ಹೋರಾಟಗಾರ ಪಾಲನೇತ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.