ಬೆಂಗಳೂರು | ವಿಮಾನದಲ್ಲಿ ಹುಸಿ ಬಾಂಬ್ ಬೆದರಿಕೆ : ಪ್ರಯಾಣಿಕನ ಬಂಧನ
ಬೆಂಗಳೂರು : ವಿಮಾನದಲ್ಲಿ ಬಾಂಬ್ ಅಡಗಿಸಿಟ್ಟಿರುವುದಾಗಿ ಹುಸಿ ಬೆದರಿಕೆ ಹಾಕಿದ್ದ ಆರೋಪದಡಿ ಪ್ರಯಾಣಿಕನನ್ನು ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ರಾಜೇಶ್‍ಕುಮಾರ್ ದೇನಿವಾಲ್ ಎಂಬ ಪ್ರಯಾಣಿಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿರುವುದಾಗಿ ವಿಮಾನ ನಿಲ್ದಾಣದ ಪೊಲೀಸರು ತಿಳಿಸಿದ್ದಾರೆ. ಮೇ 18ರ ಬೆಳಗ್ಗೆ ಬೆಂಗಳೂರಿನಿಂದ ಪುಣೆಗೆ ಹೊರಟ್ಟಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿದ್ದ ಪ್ರಯಾಣಿಕ ಚೆಕ್‍ಇನ್ ಬ್ಯಾಗ್‍ನಲ್ಲಿ ಬಾಂಬ್ ಹುದುಗಿಸಿಟ್ಟಿರುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಕೂಡಲೇ ಎಚ್ಚೆತ್ತುಕೊಂಡು ವಿಮಾನ ನಿಲ್ದಾಣದ ಅಧಿಕಾರಿಗಳು ಎಲ್ಲಾ ಬ್ಯಾಗ್‍ಗಳನ್ನು ತಪಾಸಣೆಗೆ ಒಳಪಡಿಸಿ ತೀವ್ರ ಶೋಧ ನಡೆಸಿದರು. ಆದರೆ, ಎಲ್ಲಿಯೂ ಬಾಂಬ್ ಇಟ್ಟಿರುವುದು ಪತ್ತೆಯಾಗಲಿಲ್ಲ. ರಾಜೇಶ್‍ಕುಮಾರ್ ದೇನಿವಾಲ್‍ನನ್ನು ಕೂಡಲೇ ಬಂಧಿಸಲಾಯಿತು. ಮೂಲತಃ ಹರಿಯಾಣದ ಹಿಸ್ಸಾರ ಜಿಲ್ಲೆಯ ನಿವಾಸಿಯಾದ ಆರೋಪಿಯು ಬೆಂಗಳೂರಿನಿಂದ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನ ಸಂಖ್ಯೆ 15812ನಲ್ಲಿ ಪ್ರಯಾಣಿಸಲು ಮುಂದಾಗಿದ್ದ ಎಂದು ಹೇಳಲಾಗಿದೆ.
ಟರ್ಮಿನಲ್ 2ನಲ್ಲಿದ್ದ ಆರೋಪಿ ಪ್ರಯಾಣಿಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಅದೊಂದು ಹುಸಿ ಬಾಂಬ್ ಬೆದರಿಕೆಯಾಗಿದೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.