ಬೆಂಗಳೂರು | ಕಾಂಬೋಡಿಯಾಗೆ 111 ಸಿಮ್ ಕಾರ್ಡ್‍ಗಳನ್ನು ಕೊರಿಯರ್ ಮಾಡಲು ಯತ್ನಿಸಿದ ವ್ಯಕ್ತಿ ವಿರುದ್ಧ ಎಫ್‍ಐಆರ್ ದಾಖಲು
ಬೆಂಗಳೂರು : ಖಾಸಗಿ ಕೊರಿಯರ್ ಸೇವೆಯ ಮೂಲಕ 111 ಸಿಮ್ ಕಾರ್ಡ್‍ಗಳನ್ನು ಕಾಂಬೋಡಿಯಾಗೆ ಕಳುಹಿಸಲು ಯತ್ನಿಸಿದ ಆರೋಪದಡಿ ಚೆನ್ನೈ ಮೂಲದ ವ್ಯಕ್ತಿಯ ವಿರುದ್ಧ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ಚೆನ್ನೈ ಮೂಲದ ಸೈಯದ್(37) ಎಂಬಾತ ಫೆ.2ರಂದು ಕಾಂಬೋಡಿಯಾಗೆ ಪಾರ್ಸೆಲ್ ಕಳುಹಿಸಲು ಬ್ಲೂ ಡಾರ್ಟ್ ಎಕ್ಸ್ ಪ್ರೆಸ್ ಸೇವೆ ಬಳಸಿದ್ದಾರೆ. ಪಾರ್ಸೆಲ್‍ಗಳನ್ನು ಸ್ಕ್ಯಾನ್ ಮಾಡುವ ಸ್ಕ್ಯಾನರ್ ಸಿಮ್ ಕಾರ್ಡ್‍ಗಳು ಇರುವುದನ್ನು ಪತ್ತೆಹಚ್ಚಿದೆ ಎಂದು ಎಫ್‍ಐಆರ್ ನಲ್ಲಿ ಉಲ್ಲೇಖಸಲಾಗಿದೆ ಎಂದು ಗೊತ್ತಾಗಿದೆ.
ಈ ಪ್ರಕರಣವನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಕಳೆದ ಎರಡು ತಿಂಗಳಿನಿಂದ ಆಂತರಿಕವಾಗಿ ಚರ್ಚೆ ನಡೆಯುತ್ತಿತ್ತು. ಕೊನೆಗೆ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಲು ನಿರ್ಧರಿಸಲಾಯಿತು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಸೈಯದ್ ವಿರುದ್ಧ ಎ.22ರಂದು ದೂರಸಂಪರ್ಕ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 424 ಮತ್ತು 120 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.