ಬೆಂಗಳೂರು | ವಿದೇಶಿ ಮಹಿಳೆ ಕೊಲೆ ಪ್ರಕರಣ: ಇಬ್ಬರ ಬಂಧನ

Update: 2024-03-16 14:15 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ಉಜ್ಬೇಕಿಸ್ಥಾನದ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಶೇಷಾದ್ರಿಪುರಂ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಮಹಿಳೆ ಬಳಿಯಿದ್ದ ವಿದೇಶಿ ಹಣ ಮತ್ತು ಮೊಬೈಲ್‍ಗಾಗಿ ಹತ್ಯೆ ಮಾಡಿದ ಆರೋಪದಡಿ ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಅಸ್ಸಾಂ ಮೂಲದ ಇಬ್ಬರನ್ನು ಬಂಧಿಸಿ ಆರೋಪಿಗಳಿಂದ 13 ಸಾವಿರ ರೂ. ನಗದು, 2 ಸಾವಿರ ರೂ. ಮುಖಬೆಲೆಯ ಉಜ್ಬೇಕಿಸ್ಥಾನದ ಎರಡು ನೋಟುಗಳು 5 ಸಾವಿರ ರೂ. ಮುಖಬೆಲೆಯ ಒಂದು ನೋಟನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?: ಪ್ರವಾಸಿ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಜರೀನಾ ಕಳೆದ ಆರು ದಿನಗಳಿಂದ ಶೇಷಾದ್ರಿಪುರಂ ಬಳಿಯಿರುವ ಜಗದೀಶ್ ಹೋಟೆಲ್‍ನಲ್ಲಿ ತಂಗಿದ್ದರು. ಮಾ.13ರ ಬುಧವಾರ ಸಂಜೆಯಿಂದ ಹೋಟೆಲ್ ಸಿಬ್ಬಂದಿಗೆ ಪ್ರತಿಕ್ರಿಯಿಸದ ಕಾರಣ ಅನುಮಾನಗೊಂಡ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ರೂಮ್‍ನ ಬಾಗಿಲು ತೆರೆದಿದ್ದರು. ಈ ವೇಳೆ ಜರೀನಾ ಶವ ರೂಪದಲ್ಲಿ ಪತ್ತೆಯಾಗಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಶೇಷಾದ್ರಿಪುರಂ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದರು. ಬಳಿಕ ಅನುಮಾನಾಸ್ಪದ ಸಾವಿನಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಹೋಟೆಲ್‍ನಲ್ಲಿ ಹೌಸ್ ಕೀಪಿಂಗ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಗಳಿಬ್ಬರು ರೂಮ್ ಸರ್ವಿಸ್‍ಗೆ ಹೋಗಿದ್ದಾಗ ಮಹಿಳೆಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ ಆಕೆ ಬಳಿಯಿದ್ದ ಹಣ ಮತ್ತು ಮೊಬೈಲ್ ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿಯನ್ನು ಕಲೆಹಾಕಿದ ಪೊಲೀಸರು ಈ ಇಬ್ಬರಿಗಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿ ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News