ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆ | ಮತದಾನದ ಲೈವ್ ವೆಬ್‍ಕಾಸ್ಟಿಂಗ್ ಮಾಡಲು ಬಿಜೆಪಿ ನಿಯೋಗ ಮನವಿ

Update: 2024-05-28 16:55 GMT

ಬೆಂಗಳೂರು : ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯು ಜೂನ್ 3ರಂದು ನಡೆಯಲಿದೆ. ಕನಕಪುರ, ಹೊಸಕೋಟೆ, ಆನೇಕಲ್, ದೇವನಹಳ್ಳಿ, ಬಿ.ಟಿಎಂ. ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಲೈವ್ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮಾಡುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಬಿಜೆಪಿ ನಿಯೋಗವು ಮನವಿ ಸಲ್ಲಿಸಿದೆ.

ಮಂಗಳವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದ ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್, ಹಿರಿಯ ಮುಖಂಡ ದತ್ತಗುರು ಹೆಗ್ಡೆ, ಪ್ರಕೋಷ್ಠದ ಸದಸ್ಯ ಯಶವಂತ್, ವೀಣಾ ಅರುಣ್, ಕೆ.ಪಿ.ವಿಶ್ವನಾಥ್, ಬೆಂಗಳೂರು ಉತ್ತರ ಜಿಲ್ಲಾ ಸಂಚಾಲಕ ಶಿವಾನಂದ ಅವರನ್ನು ಒಳಗೊಂಡ ನಿಯೋಗ ಈ ಮನವಿ ಸಲ್ಲಿಸಿತು.

ಮನವಿಯಲ್ಲಿ ತಿಳಿಸಿದ ವಿಧಾನಸಭಾ ಕ್ಷೇತ್ರಗಳು ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಒಳಗೊಂಡಿವೆ. ಮತದಾನ ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಯುವ ದೃಷ್ಟಿಯಿಂದ ಮೇಲಿನ ಕ್ಷೇತ್ರಗಳಲ್ಲಿ ಮತದಾನದ ದಿನದಂದು ಲೈವ್ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮಾಡುವಂತೆ ಮನವಿಯಲ್ಲಿ ಕೋರಲಾಗಿದೆ.

ಮತದಾನ ಮಾಡಲು ರಜೆ ನೀಡುವಂತೆ ಮನವಿ: ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ 1,21,860 ಮತದಾರರು ನೋಂದಣಿ ಮಾಡಿಸಿಕೊಂಡಿದ್ದಾರೆ. ಜೂ.3ರಂದು ಮತದಾನ ಮಾಡಲು ಅನುಕೂಲವಾಗುವಂತೆ ಅರ್ಧ ದಿನ ವೇತನ ಸಹಿತ ರಜೆ ನೀಡುವಂತೆ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು, ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಅರ್ಹ ಮತದಾರರಿಗೆ ರಜೆ ನೀಡುವಂತೆ ಅಗತ್ಯ ಸುತ್ತೋಲೆ, ಆದೇಶಗಳನ್ನು ಹೊರಡಿಸುವಂತೆಯೂ ಬಿಜೆಪಿ ನಿಯೋಗ ಮನವಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News