ಬೆಂಗಳೂರು | ಕಾವೇರಿ ನೀರು 5ನೇ ಹಂತದ ಯೋಜನೆ ಅನುಷ್ಠಾನ : ಜೂ.6, 7ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

Update: 2024-06-02 15:47 GMT

ಬೆಂಗಳೂರು : ಕಾವೇರಿ ನೀರು ಸರಬರಾಜು 5ನೇ ಹಂತದ ಯೋಜನೆಯ ಅನುಷ್ಠಾನಕ್ಕೆ ಸಂಪರ್ಕ ಸೇರಿದಂತೆ ಹಲವು ಕಾಮಗಾರಿಗಳು ನಡೆಯಲಿರುವುದರಿಂದ ಜೂ 6 ಮತ್ತು 7 ರಂದು ಬೆಂಗಳೂರು ನಗರಕ್ಕೆ ಕಾವೇರಿ ನೀರು ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾವೇರಿ 5ನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಜೂನ್ 6ರಂದು ಕಾವೇರಿ 1, 2 ಮತ್ತು 3ನೇ ಹಂತಗಳ ನೀರು ಸರಬರಾಜು ಘಟಕಗಳನ್ನು 12 ಘಂಟೆಗಳ ಕಾಲ (ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ) ಹಾಗೂ ಕಾವೇರಿ 4ನೇ ಹಂತ, 1ನೇ ಮತ್ತು 2ನೇ ಘಟ್ಟಗಳ ನೀರು ಸರಬರಾಜು ಘಟಕಗಳನ್ನು 4 ಗಂಟೆಗಳ ಕಾಲ (ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ) ಸ್ಥಗಿತಗೊಳಿಸಲು ತೀರ್ಮಾನಿಸಿದೆ.

ಈ ಹಿನ್ನೆಲೆಯಲ್ಲಿ ಜೂ.6 ಮತ್ತು ಜೂ.7ರಂದು ಎರಡು ದಿನಗಳ ಕಾಲ ಬೆಂಗಳೂರು ನಗರಕ್ಕೆ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಪ್ರದೇಶದಲ್ಲಿರುವ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News