ಬೆಂಗಳೂರು | ಹೆಚ್ಚುತ್ತಿರುವ ಸಂಚಾರ ದಟ್ಟಣೆ: ಪ್ರತ್ಯೇಕ ಬಸ್ ಲೇನ್ ನಿರ್ಮಾಣಕ್ಕೆ ಸಿದ್ಧತೆ

Update: 2024-02-18 14:35 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿರ್ವಹಿಸಲು ಮತ್ತು ಬಿಎಂಟಿಸಿ ಬಸ್‍ಗಳಿಂದ ಉಂಟಾಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಪಾಲಿಕೆ ಪ್ರತ್ಯೇಕ ಬಸ್ ಲೇನ್ ಯೋಜನೆಯನ್ನು ಜಾರಿ ಮಾಡಲು ಬಿಬಿಎಂಪಿ ಸಿದ್ದತೆ ನಡೆಸುತ್ತಿದೆ.

ಹೆಚ್ಚು ಸಂಚಾರ ದಟ್ಟಣೆ ಇರುವ ಒಂಬತ್ತು ಕಾರಿಡಾರ್ ಗಳಲ್ಲಿ ಬಸ್ ಲೇನ್‍ಗಳನ್ನು ನಿರ್ಮಾಣ ಮಾಡಲು ಯೋಜನೆ ಸಿದ್ಧವಾಗಿದೆ. ಬಿಎಂಟಿಸಿಯ ಮನವಿ ಬಂದಿರುವ ಹಿನ್ನೆಲೆಯಲ್ಲಿ ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಕನಕಪುರ ರಸ್ತೆ ಸೇರಿದಂತೆ 9 ಕಾರಿಡಾರ್ ಗಳಲ್ಲಿ ಪ್ರತ್ಯೇಕ ಬಸ್ ಲೇನ್ ನಿರ್ಮಾಣವಾಗಲಿದೆ. ಒಟ್ಟು 83 ಕಿ.ಮೀ ಬಸ್ ಲೇನ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಖಾಸಗಿ ಏಜೆನ್ಸಿಯಿಂದ ಬಸ್ ಲೇನ್ ಡಿಸೈನ್ ಸಿದ್ಧವಾಗುತ್ತಿದೆ. ಪ್ರತ್ಯೇಕ ಪಥವನ್ನು ನಿರ್ಮಿಸಲು ಟೆಂಡರ್ ಆಹ್ವಾನಿಸಲಾಗುತ್ತಿದೆ. ಈ ಹಿಂದೆ ಸಿಲ್ಕ್ ಬೋರ್ಡ್‍ನಿಂದ ಕೆ.ಆರ್.ಪುರ ಬಳಿಯಿರುವ ಟಿನ್ ಫ್ಯಾಕ್ಟರಿ ವರೆಗೆ ಪರೀಕ್ಷಾರ್ಥವಾಗಿ ಬಸ್ ಲೇನ್ ನಿರ್ಮಿಸಲಾಗಿದೆ. ಅಲ್ಲಿ ನಮ್ಮ ಮೆಟ್ರೋ ಕಾಮಗಾರಿಯಿಂದಾಗಿ ಆ ಪಥದಲ್ಲಿ ಕಾರ್ಯಾಚರಣೆಯು ಸಾಧ್ಯವಾಗಿಲ್ಲ.

ನಗರದ 9 ಕಾರಿಡಾರ್ ಗಳಲ್ಲಿ 280 ಕೋಟಿ ವೆಚ್ವದಲ್ಲಿ 83ಕಿ.ಮೀ. ಬಸ್ ಲೇನ್ ಮಾಡಲು ತೀರ್ಮಾನಿಸಲಾಗಿದ್ದು, ಆಯಾ ರಸ್ತೆಗಳಲ್ಲಿ 3.5 ಮೀಟರ್ ಅಗಲವನ್ನು ಮಾತ್ರ ಬಸ್‍ಗಳ ಸಂಚಾರಕ್ಕೆ ಮೀಸಲಿಡಲು ನಿರ್ಧರಿಸಲಾಗಿದೆ.

ಬಿಎಂಟಿಸಿ, ಅಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನ ಸೇರಿದಂತೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ಇತರ ವಾಹನಗಳು ಬರುವುದನ್ನು ತಡೆಯಲು ಬೋರ್ಡ್ ಅಳವಡಿಸಲು ನಿರ್ಧಾರ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News