ಬೆಂಗಳೂರು| ಪಿಜಿಗಳಿಗೆ ನುಗ್ಗಿ ಲ್ಯಾಪ್‍ಟಾಪ್ ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ
Update: 2023-12-19 13:46 GMT
ಬೆಂಗಳೂರು: ಹಾಡಹಗಲೇ ಪಿಜಿಗಳಿಗೆ ನುಗ್ಗಿ ಲ್ಯಾಪ್‍ಟಾಪ್ ಹಾಗೂ ಮೊಬೈಲ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ಮೂವರನ್ನು ಯಶವಂತಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 16 ಲಕ್ಷ ರೂಪಾಯಿಗೂ ಹೆಚ್ಚು ಬೆಲೆ ಬಾಳುವ 50ಕ್ಕೂ ಹೆಚ್ಚು ಲ್ಯಾಪ್‍ಟಾಪ್ ಹಾಗೂ 7 ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಬಂಧಿತರೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪಿಜಿಗಳಲ್ಲಿ ಲ್ಯಾಪ್‍ಟಾಪ್ ಹಾಗೂ ಮೊಬೈಲ್‍ಗಳು ಕಳ್ಳತನ ಆಗುತ್ತಿದ್ದ ದೂರುಗಳು ಹೆಚ್ಚು ದಾಖಲಾದ ಹಿನ್ನೆಲೆಯಲ್ಲಿ ಖದೀಮರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ನ.29ರಂದು ಮತ್ತಿಕೆರೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆಂಧ್ರದ ಚಿತ್ತೂರಿನ ವಿ. ಕೋಟಾದ ಯುವರಾಜ್, ಪ್ರಭು ಎಂಬ ಇಬ್ಬರನ್ನು ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.