ಬೆಂಗಳೂರು| ಹೊಸ ವರ್ಷಾಚರಣೆ: ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Update: 2023-12-30 16:30 GMT

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಅವರು, ಹೊಸ ವರ್ಷಾಚರಣೆಗೆ ಡಿ.31ರ ರವಿವಾರ ರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು, ವಾಹನ ಸವಾರರು ಮತ್ತು ಪಾದಚಾರಿಗಳು ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೈಂಟ್ ಮಾಕ್ರ್ಸ್ ರಸ್ತೆ, ಮತ್ತು ಚರ್ಚ್ ಸ್ಟ್ರೀಟ್‍ನಲ್ಲಿ ಸಂಭ್ರಮಾಚರಣೆಗಾಗಿ ಜಮಾವಣೆಗೊಳ್ಳುವುದರಿಂದ ಬಿಗಿ ಬಂದೋಬಸ್ತ್ ಮಾಡಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಕಟ್ಟೆಚ್ಚರ ಕ್ರಮ ತೆಗೆದುಕೊಳ್ಳಲಾಗಿದೆ. ನಗರದ ವಿವಿಧೆಡೆ 400ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಬೆಂಗಳೂರು ಹೊರವಲಯ ಮತ್ತು ಗ್ರಾಮಾಂತರದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, 31ರ ರಾತ್ರಿ ಹೊಸ ವರ್ಷಾಚರಣೆ ಆಚರಿಸುವ ಹಿನ್ನೆಲೆಯಲ್ಲಿ ನಂದಿಹಿಲ್ಸ್ ರಸ್ತೆ, ನೆಲಮಂಗಲ, ಆನೇಕಲ್, ಹೊಸಕೋಟೆ ಸೇರಿದಂತೆ ಹಲವೆಡೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಜನವರಿ 1ರವರೆಗೂ ಶಿವಗಂಗೆ, ಸಿದ್ದರಬೆಟ್ಟ, ಅವತಿ ಬೆಟ್ಟ, ಮಾಕಳಿ ಬೆಟ್ಟದಲ್ಲಿ ಟ್ರಕ್ಕಿಂಗ್ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಮ್ಯೂಸಿಕ್, ಡಿಜೆ ಕಾರ್ಯಕ್ರಮದ ಮೇಲೂ ನಿಗಾ ವಹಿಸಿದ್ದು, ರೆಸ್ಟೋರೆಂಟ್ ಮತ್ತು ಫಾರ್ಮ್ ಹೌಸ್‍ನಲ್ಲಿ ಮ್ಯೂಸಿಕ್ ಕಾರ್ಯಕ್ರಮ ಇದ್ದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದ್ದು, ಸಂಭ್ರಮಾಚರಣೆಗೆ ಡಿ.31ರ ರಾತ್ರಿ 1ಗಂಟೆಯವರೆಗೂ ಮಾತ್ರ ಅನುಮತಿಯಿದ್ದು ಒಂದು ಗಂಟೆಯ ನಂತರ ಡಾಬಾ, ಪಬ್ ಎಲ್ಲವನ್ನೂ ಬಂದ್ ಮಾಡುವಂತೆ ಸೂಚಿಸಿದ್ದಾರೆ.

ಅನುಮತಿ ಇಲ್ಲದೆ ಪಾರ್ಟಿ ಆಯೋಜನೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಅಷ್ಟೇ ಅಲ್ಲದೆ, ಬೆಂಗಳೂರು ನಗರ ಸಂಪರ್ಕಿಸುವ ರಸ್ತೆಗಳಲ್ಲಿ ನಾಕಾಬಂಧಿಯಿದ್ದು, ಗಾಂಜಾ, ಡ್ರಗ್ ನಗರ ಪ್ರವೇಶಿಸದಂತೆ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಹೊಸ ವರ್ಷಾಚರಣೆಗೆಂದು ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಿಗೆ ಬರುವವರು ತಮ್ಮ ಸ್ವಂತ ವಾಹನಗಳನ್ನು ಬಳಸದೇ, ನಮ್ಮ ಮೆಟ್ರೋ ಬಿಎಂಟಿಸಿ, ಕೆಎಸ್ಸಾರ್ಟಿಸಿ, ಕ್ಯಾಬ್, ಆಟೋ ಸೇವೆಗಳನ್ನ ಬಳಸಿಕೊಳ್ಳುವಂತೆ ಬೆಂಗಳೂರು ಪೊಲೀಸರು ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News