ಬೆಂಗಳೂರು| ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಆರೋಪಿ ವಿರುದ್ಧ ದೂರು ದಾಖಲು
ಬೆಂಗಳೂರು: ಕರ್ತವ್ಯನಿರತ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಗಿರಿನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ದೇವರಾಜೇ ಅರಸು ನೀಡಿದ ದೂರಿನನ್ವಯ ಜಗದೀಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಡಿ.14ರಂದು ಬೆಳಗ್ಗಿನ ಜಾವ ಆರೋಪಿ ಜಗದೀಶ್, ತನಗೆ ಪರಿಚಿತ ಮಹಿಳೆಯೊಬ್ಬರು ಹಾಗೂ ಅರುಣ್ ಕುಮಾರ್ ಎಂಬಾತನ ಮಧ್ಯೆ ಹಣದ ವರ್ಗಾವಣೆ, ಮೆಸೇಜ್ ರವಾನೆಯಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅರುಣ್ ಕುಮಾರ್ ಮನೆ ಮುಂದೆ ಗಲಾಟೆ ಮಾಡುತ್ತಿದ್ದ. ಇದರಿಂದ ಅರುಣ್ ಕುಮಾರ್ ಪಕ್ಕದ ಮನೆಯವರು ಹೊಯ್ಸಳ ಕಂಟ್ರೋಲ್ ರೂಂಗೆ ಕರೆ ಮಾಡಿದ್ದರು. ಹೊಯ್ಸಳ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಆತನನ್ನು ಅಲ್ಲಿಂದ ಕಳುಹಿಸಲು ಯತ್ನಿಸಿದಾಗ ಅವಾಚ್ಯವಾಗಿ ನಿಂದಿಸಲಾರಂಭಿಸಿದ್ದ ಜಗದೀಶ್, ನನಗೆ ಮಾನವ ಹಕ್ಕು ಆಯೋಗದವರು ಗೊತ್ತು, ನಿಮ್ಮನ್ನು ಜೈಲಿಗೆ ಕಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ತಕ್ಷಣ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸ್ ಸಿಬ್ಬಂದಿ ಠಾಣೆಗೆ ಕರೆತಂದು, ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಇನ್ಸ್ ಪೆಕ್ಟರ್ ಮುಂದೆ ಹಾಜರುಪಡಿಸಿದ್ದರು.
ಈ ಸಂದರ್ಭದಲ್ಲಿ ಆರೋಪಿಯು ಇನ್ಸ್ ಪೆಕ್ಟರ್ ಗೆ ಧಮ್ಕಿ ಹಾಕಿದ್ದಾನೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ನಿಮ್ಮ ಮಾನ ತೆಗೆಯುತ್ತೇನೆ ಎನ್ನುತ್ತಾ ಪೊಲೀಸ್ ಸಿಬ್ಬಂದಿ ದೂರು ದಾಖಲಿಸಲು ಬಿಡದೇ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ಎಫ್‍ಐಆರ್ ನಲ್ಲಿ ತಿಳಿಸಲಾಗಿದೆ.