ಬೆಂಗಳೂರು| ನಿಷೇಧಿತ ಮಾದಕವಸ್ತುಗಳ ಮಾರಾಟ: ಓರ್ವ ವಿದೇಶಿ ಪ್ರಜೆ ಸಹಿತ ಇಬ್ಬರ ಬಂಧನ

Update: 2023-12-23 07:36 GMT

Photo: PTI

ಬೆಂಗಳೂರು: ಹೊಸ ವರ್ಷಾಚರಣೆಯ ಹಿನ್ನೆಲೆ ನಗರದ ಬೇಗೂರು, ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿಷೇಧಿತ ಮಾದಕವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿರುತ್ತಾರೆಂಬ ಬಗ್ಗೆ ನಿಖರ ಮಾಹಿತಿ ಪಡೆದ ಸಿಸಿಬಿಯ ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳ ತಂಡವು, ದಾಳಿ ನಡೆಸಿ ಒಬ್ಬ ವಿದೇಶಿ ಮತ್ತು ಇಬ್ಬರು ಕೇರಳ ಮೂಲದ ಡ್ರಗ್‌ಪೆಡ್ಲರ್‌ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತರಿಂದ ನಿಷೇಧಿತ ಮಾದಕ ವಸ್ತುಗಳಾದ ಎಂಡಿಎಂಎ ಮಾತ್ರೆಗಳು, ಎಲ್‌.ಎಸ್.ಡಿ ಪಟ್ಟಿಗಳು, ಎಕ್ಸ್ಟೆಸಿ ಮಾತ್ರೆ, ಕೊಕೇನ್‌ ಹಾಗೂ 3 ಮೊಬೈಲ್‌ ಫೋನ್‌ , ದ್ವಿಚಕ್ರ ವಾಹನ ವಶಕ್ಕೆ ಪಡಯಲಾಗಿದ್ದು, ಇದರ ಒಟ್ಟು ಮೌಲ್ಯ 52.78 ಲಕ್ಷ ರೂ.  ಎಂದು ಅಂದಾಜಿಸಲಾಗಿದೆ. ವಶಕ್ಕೆ ಪಡೆದ ವ್ಯಕ್ತಿಗಳ ವಿರುದ್ಧ ಬೇಗೂರು ಮತ್ತು ಕೋರಮಂಗಲ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರೆದಿದೆ.

ಬೇಗೂರು ಪೊಲೀಸ್ ಠಾಣೆಯಲ್ಲಿ ವರದಿಯಾಗಿರುವ ಪ್ರಕರಣದಲ್ಲಿ ದಸ್ತಗಿರಿಯಾಗಿರುವ ವಿದೇಶಿ ಪ್ರಜೆಯು ಸುಮಾರು ಒಂದು ವರ್ಷದ ಹಿಂದೆ ಬ್ಯುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿದ್ದು ಕಳೆದ ಮೂರು ತಿಂಗಳಿನಿಂದ ಬೆಂಗಳೂರಿನಲ್ಲಿ ವಾಸವಾಗಿದ್ದುಕೊಂಡು, ನಗರದಲ್ಲಿ ನೆಲೆಸಿರುವ ಆಫ್ರಿಕಾ ಮೂಲದ ಪ್ರಜೆಗಳಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿ ಮಾಡಿ ಅವುಗಳನ್ನು ಪರಿಚಯಸ್ಥ ಗಿರಾಕಿಗಳಿಗೆ ಖುದ್ದಾಗಿ ಸರಬರಾಜು ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದನೆಂದು ವಿಚಾರಣೆಯಿಂದ ತಿಳಿದುಬಂದಿರುತ್ತದೆ.

ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದಿರುವ ಕೇರಳ ಮೂಲದ ಇಬ್ಬರು ಡ್ರಗ್‌ಪೆಡ್ಲರ್‌ಗಳು ಸ್ಥಳೀಯ ಡ್ರಗ್‌ಪೆಡ್ಲರ್‌ನಿಂದ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿಸಿ, ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡಿತ್ತಿದ್ದರು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News