ಬೆಂಗಳೂರು | ರಸ್ತೆ ಬದಿ ಮಲಗಿದ್ದವರನ್ನು ಕೊಲೆಗೈಯ್ಯುತ್ತಿದ್ದ ಪ್ರಕರಣ : ಆರೋಪಿ ಸೆರೆ
ಬೆಂಗಳೂರು : ಮದ್ಯದ ಅಮಲಿನಲ್ಲಿ ಬಂದು ರಸ್ತೆ ಬದಿ ಮಲಗಿದ್ದವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈಯ್ಯುತ್ತಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ಬನಶಂಕರಿ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಒಂದೇ ವಾರದಲ್ಲಿ ಇಬ್ಬರನ್ನು ಕೊಲೆಗೈದಿದ್ದ ಆರೋಪಿ ಗಿರೀಶ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 12ರಂದು ಜಯನಗರ 7ನೇ ಹಂತದಲ್ಲಿನ ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಮದ್ಯದ ಅಮಲಿನಲ್ಲಿದ್ದ ಆರೋಪಿ ಗಿರೀಶ್ ಕೃತ್ಯ ಎಸಗಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಈ ಕುರಿತು ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ, ಮೇ 18ರಂದು ಅದೇ ಮಾದರಿಯಲ್ಲಿ ಸಿಟಿ ಮಾರ್ಕೆಟ್ ಹಿಂಭಾಗದ ಕಾಂಪ್ಲೆಕ್ಸ್ ನಲ್ಲಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈಯಲಾಗಿತ್ತು. ಈ ಕೊಲೆಯನ್ನೂ ಕೂಡ ಗಿರೀಶನೇ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೃತ್ಯದ ಕುರಿತು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಕೊಲೆಗಳ ಆರೋಪಿಗಾಗಿ ಎರಡೂ ಠಾಣೆಗಳ ಪೊಲೀಸರು ಹುಡುಕಾಟ ನಡೆಸಿದ್ದರು. ಸದ್ಯ ನಗರದ ಬನಶಂಕರಿ ಠಾಣೆ ಪೊಲೀಸರು ಆರೋಪಿ ಗಿರೀಶ್‍ನನ್ನು ಬಂಧಿಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.