ಬೆಂಗಳೂರು | ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ ಪತ್ತೆ ; ವರದಕ್ಷಿಣೆ ಕಿರುಕುಳ ಆರೋಪ

Update: 2024-01-23 15:00 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಇಲ್ಲಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ ಮಂಗಳವಾರ ವರದಿಯಾಗಿದೆ.

ಮೃತರನ್ನು ರಂಜಿತಾ(29) ಎಂದು ಗುರುತಿಸಲಾಗಿದೆ. ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ರಂಜಿತಾ ಅವರು ತುಮಕೂರು ಜಿಲ್ಲೆ ತುರುವೇಕೆರೆ ಮೂಲದ ಮಧು ಎಂಬುವರನ್ನು ಐದು ವರ್ಷದ ಹಿಂದೆ ಮದುವೆಯಾಗಿದ್ದರು ಎನ್ನಲಾಗಿದೆ. ದಂಪತಿಗೆ ಮೂರು ವರ್ಷದ ಹೆಣ್ಣು ಮಗು ಇದೆ.

ರಂಜಿತಾಗೆ ಆಕೆಯ ಪತಿ ಮಧು ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ರಂಜಿತಾ ಮನೆಯವರು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಮಹಿಳೆ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪತಿ ಮಧು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾದಾಗಿನಿಂದಲೂ ರಂಜಿತಾಗೆ ಆಕೆಯ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಆಕೆಯ ಜೊತೆಗೆ ಜಗಳವಾಡುತ್ತಿದ್ದರು. ವರದಕ್ಷಿಣೆ ನೀಡಬೇಕೆಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ರಂಜಿತಾಗೆ ಕಿರುಕುಳ ನೀಡುತ್ತಿದ್ದರು ಎಂದು ಸ್ವತಃ ರಂಜಿತಾ ತನ್ನ ಪೋಷಕರ ಜೊತೆಗೆ ಆಗಾಗ ಈ ವಿಚಾರವನ್ನು ಹೇಳಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರವೂ ಕೂಡ ಪತ್ನಿಯ ಜತೆಗೆ ಪತಿ ಜಗಳ ಆರಂಭ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ರಂಜಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ರಂಜಿತಾ ಸಾವಿಗೂ ಮುನ್ನ ತಾಯಿಗೆ ವೀಡಿಯೊ ಕಾಲ್ ಮಾಡಿದ್ದರು. ಬಳಿಕ ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News