ಬೆಂಗಳೂರು| ಮೂರು ಪ್ರತ್ಯೇಕ ಅಪಘಾತ: ಟೆಕ್ಕಿ ಸೇರಿ ಮೂವರು ಮೃತ್ಯು
ಬೆಂಗಳೂರು: ಹೊಸ ವರ್ಷಾಚರಣೆ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ನಗರದಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಟೆಕ್ಕಿ ಸೇರಿ ಮೂವರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಂಡು ಸ್ನೇಹಿತರೊಂದಿಗೆ ಆಟೋದಲ್ಲಿ ಬರುತ್ತಿದ್ದಾಗ ಕಾರು ಢಿಕ್ಕಿಯಾಗಿ ಹರಿಯಾಣ ಮೂಲದ ಸಾಫ್ಟ್ ವೇರ್ ಎಂಜನಿಯರ್ ಮೃತಪಟ್ಟಿದ್ದಾರೆ. ನಗರದ ಕಸವನಹಳ್ಳಿಯಲ್ಲಿ ವಾಸವಾಗಿದ್ದ ರವಿ ಕಾರ್ತಿಕೇಯನ್(28) ಮೃತಪಟ್ಟ ಟೆಕ್ಕಿ ಎಂದು ಗುರುತಿಸಲಾಗಿದೆ.
ಹರಿಯಾಣ ಮೂಲದ ರವಿ ಕಾರ್ತಿಕೇಯನ್ ಡಿ.31ರ ರಾತ್ರಿ ತನ್ನ ಮೂವರು ಸ್ನೇಹಿತರೊಂದಿಗೆ ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಂಡು ಮಧ್ಯರಾತ್ರಿ 12.45ರ ಸುಮಾರಿನಲ್ಲಿ ಆಟೋದಲ್ಲಿ ಬರುತ್ತಿದ್ದಾಗ ಸರ್ಜಾಪುರ ರಸ್ತೆಯ ಅಪಾರ್ಟ್ ಮೆಂಟ್ ಬಳಿ ಎದುರಿನಿಂದ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿದೆ.
ಪರಿಣಾಮ ಆಟೋದಲ್ಲಿದ್ದ ಚಾಲಕ ಸೇರಿದಂತೆ ಐದು ಮಂದಿ ಗಾಯಗೊಂಡು ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ರವಿ ಕಾರ್ತಿಕೇಯನ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಬೆಳ್ಳಂದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ ಹೊಸ ವರ್ಷಾಚರಣೆ ಪಾರ್ಟಿಯಲ್ಲಿ ಪಾಲ್ಗೊಂಡು ವಾಪಸ್ ಬೈಕ್ ನಲ್ಲಿ ಮನೆಗೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದಾರೆ.
ಕಾಚರಕನಹಳ್ಳಿ ನಿವಾಸಿ ಚೇತನ್(22) ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಡಿ.31ರ ರಾತ್ರಿ ಪಾರ್ಟಿ ಮುಗಿಸಿಕೊಂಡು ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಚೇತನ್ ಮನೆಗೆ ಹೋಗುತ್ತಿದ್ದಾಗ ಕೊತ್ತನೂರು ಮುಖ್ಯರಸ್ತೆಯಲ್ಲಿ ಅತಿವೇಗದಿಂದಾಗಿ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದು ತೀವ್ರ ಪೆಟ್ಟಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಹೆಣ್ಣೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನೊಂದಡೆ, ಹೊಸ ವರ್ಷಾಚರಣೆಯ ಪಾರ್ಟಿ ಮುಗಿಸಿಕೊಂಡು ಉತ್ತರಪ್ರದೇಶ ಮೂಲದ ಇಬ್ಬರು ಸ್ನೇಹಿತರು ಆಕ್ಟೀವ್ ಹೋಂಡಾ ಸ್ಕೂಟರ್ ನಲ್ಲಿ ತಮ್ಮ ರೂಮ್ ಗೆ ಹಿಂದಿರುಗುತ್ತಿದ್ದಾಗ ಅತಿವೇಗದಿಂದಾಗಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಒಬ್ಬ ಸವಾರ ಮೃತಪಟ್ಟಿದ್ದಾನೆ.
ಉತ್ತರಪ್ರದೇಶ ಮೂಲದ ಧೀರಜ್(21) ಮೃತಪಟ್ಟ ಸವಾರ ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಪೈಂಟರ್. ಸ್ನೇಹಿತ ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ.