ಬೆಂಗಳೂರು | ದ್ವಿಚಕ್ರ ವಾಹನ ವ್ಹೀಲಿಂಗ್ : 33 ಪ್ರಕರಣ ದಾಖಲು, 44 ಯುವಕರು ವಶಕ್ಕೆ

Update: 2024-08-16 13:53 GMT

ಬೆಂಗಳೂರು : ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದ್ವಿಚಕ್ರ ವಾಹನ ವ್ಹೀಲಿಂಗ್ ನಡೆಸಿದ್ದ ಪ್ರಕರಣದಡಿ 44 ಯುವಕರನ್ನು ವಶಕ್ಕೆ ಪಡೆದಿರುವ ಯಲಹಂಕ ಠಾಣಾ ಪೊಲೀಸರು 33 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಯಲಹಂಕದ ಚಿಕ್ಕಜಾಲ ಬಳಿಯ ಏರ್ ಪೋರ್ಟ್ ರಸ್ತೆಯಲ್ಲಿ ಆ.15ರ ಗುರುವಾರ ಸಂಜೆ 5ಗಂಟೆ ಸಮಯದಲ್ಲಿ ಯುವಕರ ಗುಂಪೊಂದು ದ್ವಿಚಕ್ರ ವಾಹನ ವ್ಹೀಲಿಂಗ್ ಮಾಡುತ್ತಿತ್ತು. ವಿಮಾನ ನಿಲ್ದಾಣದಿಂದ ಬೆಂಗಳೂರಿನತ್ತ ಬರುತ್ತಿದ್ದ ಸಾರ್ವಜನಿಕರು ವ್ಹೀಲಿಂಗ್ ದೃಶ್ಯಗಳನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು.

ಈ ವೇಳೆ ಯುವಕನೊಬ್ಬ ತನ್ನ ಮಧ್ಯದ ಬೆರಳನ್ನು ತೋರಿಸುವ ಮೂಲಕ ಕಾರಿನಲ್ಲಿದ್ದವರಿಗೆ ಬೆದರಿಕೆ ಹಾಕಿದ್ದ. ಈ ದೃಶ್ಯವನ್ನು ಕಾರಿನಲ್ಲಿದ್ದ ಪ್ರಯಾಣಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಈ ದೃಶ್ಯದ ಆಧಾರದ ಮೇಲೆ ಕಾರ್ಯಾಚರಣೆಗಿಳಿದ ಪೊಲೀಸರು, ಏರ್‌ ಪೋರ್ಟ್ ರಸ್ತೆಯಲ್ಲಿ ವ್ಹೀಲಿಂಗ್ ನಡೆಸಿದ 44 ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

ಯಲಹಂಕ ಠಾಣಾ ವಿಭಾಗದಲ್ಲಿ ದ್ವಿಚಕ್ರ ವಾಹನ ವ್ಹೀಲಿಂಗ್ ಮಾಡುವವರ ವಿರುದ್ಧ 33 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ 9, ಯಲಹಂಕ ಠಾಣೆಯಲ್ಲಿ 6 ಮತ್ತು ಹೆಬ್ಬಾಳ ಠಾಣೆಯಲ್ಲಿ 18 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News