ಬೆಂಗಳೂರು‌ | 300ಕ್ಕೂ ಅಧಿಕ ಬಾರಿ ಸಂಚಾರ ನಿಯಮ ಉಲ್ಲಂಘನೆ: ಸ್ಕೂಟರ್ ಮಾಲಕನಿಗೆ 3.22 ಲಕ್ಷ ರೂ. ದಂಡ!

Update: 2024-02-11 12:56 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ದ್ವಿಚಕ್ರ ವಾಹನ ಸವಾರನೊಬ್ಬ 300ಕ್ಕೂ ಅಧಿಕ ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣ ಸಂಬಂಧ ಆತನಿಗೆ ಬರೋಬರಿ 3.20ಲಕ್ಷ ರೂಪಾಯಿ ದಂಡ ಹಾಕಲಾಗಿದೆ ಎಂದು ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಸುಧಾಮನಗರ ನಿವಾಸಿ ವೆಂಕಟರಾಮನ್ ಎಂಬುವರ  ಹೋಂಡಾ ಆ್ಯಕ್ಟಿವಾ ಸ್ಕೂಟರಿನ ಮೇಲೆ 300ಕ್ಕೂ ಅಧಿಕ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಿದ್ದವು. ಎಸ್.ಆರ್.ನಗರ, ವಿಲ್ಸನ್ ಗಾರ್ಡನ್ ನಗರದ ವಿವಿಧ ಪ್ರದೇಶಗಳಲ್ಲಿ ಹೆಲ್ಮೆಟ್ ಧರಿಸದೇ, ಸಿಗ್ನಲ್ ಜಂಪ್ ಮಾಡಿರುವ, ಒನ್ ವೇಯಲ್ಲಿ ಸ್ಕೂಟರ್ ಚಲಾಯಿಸಿರುವ, ಚಾಲನೆ ವೇಳೆ ಮೊಬೈಲ್‍ನಲ್ಲಿ ಮಾತಾಡಿರುವ ಪ್ರಕರಣಗಳಲ್ಲಿ ಪೊಲೀಸರು ದಂಡ ವಿಧಿಸಿರುವುದಾಗಿ ಹೇಳಿದ್ದಾರೆ.

ವೆಂಕಟರಾಮನ್ ಅವರ ಮನೆಗೆ ಶನಿವಾರ ಸಂಚಾರಿ ಪೊಲೀಸರು ತೆರಳಿ ದಂಡ ಪಾವತಿಸುವಂತೆ ಸೂಚಿಸಿದ್ದು, ಈ ವೇಳೆ 3.20 ಲಕ್ಷ ರೂ. ದಂಡ ಪಾವತಿಸಲು ಸಾಧ್ಯವಿಲ್ಲ, ಬೇಕಿದ್ದರೆ ಸ್ಕೂಟರ್ ತೆಗೆದುಕೊಂಡು ಹೋಗಿ ಎಂಬುದಾಗಿ ವೆಂಕಟರಾಮನ್ ತಿಳಿಸಿದ್ದಾರೆ. ಆದರೆ, ಸ್ಕೂಟರ್ ಬೇಡ, ದಂಡ ಪಾವತಿಸಿ, ಇಲ್ಲವಾದರೆ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನ ಸವಾರನಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನೀರಿನ ಟ್ಯಾಂಕರ್ ಚಾಲಕರ ವಿರುದ್ಧ 595 ಪ್ರಕರಣ: ಇತ್ತೀಚೆಗೆ ನಗರದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ಸಂಚಾರ ಠಾಣೆಯ ಪೊಲೀಸರು ನಿಯಮ ಉಲ್ಲಂಘಿಸಿದ್ದ ನೀರಿನ ಟ್ಯಾಂಕರ್ ಗಳ ಚಾಲಕರ ವಿರುದ್ಧ ಒಟ್ಟು 595 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಕಾರ್ಯಾಚರಣೆಯ ವೇಳೆ 252 ಸಮವಸ್ತ್ರ ಧರಿಸದ ವಾಹನ ಚಾಲನೆ, 134ನೋ ಎಂಟ್ರಿಯಲ್ಲಿ ವಾಹನ ಸಂಚಾರ, 48 ದೋಷಪೂರಿತ ನಂಬರ್ ಪ್ಲೇಟ್, 40 ಸೀಟ್ ಬೆಲ್ಟ್ ಧರಿಸದಿರುವುದು, 64 ನೋ ಪಾರ್ಕಿಂಗ್ ನಿಯಮ ಉಲ್ಲಂಘನೆ, 13 ಕರ್ಕಶ ಹಾರ್ನ್ ಮಾಡಿರುವುದು, 4 ಫುಟ್ ಪಾತ್ ಮೇಲೆ ಪಾರ್ಕಿಂಗ್, 1 ಮದ್ಯಪಾನ ಮಾಡಿ ವಾಹನ ಚಾಲನೆ ಸೇರಿದಂತೆ ಒಟ್ಟು 595 ಪ್ರಕರಣಗಳನ್ನು ದಾಖಲಿಸಿಕೊಂಡು 3.33 ಲಕ್ಷ ರೂ.ದಂಡ ಹಾಕಿರುವುದಾಗಿ ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News