ಬೆಂಗಳೂರು | ವ್ಹೀಲಿಂಗ್ : 6 ತಿಂಗಳಲ್ಲಿ 225 ಪ್ರಕರಣ ದಾಖಲು

Update: 2024-08-01 16:38 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ವ್ಹೀಲಿಂಗ್ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆ ಕೈಗೊಂಡು 2024ರ ಜೂನ್ ತಿಂಗಳ ಅಂತ್ಯಕ್ಕೆ ನಗರದಲ್ಲಿ 225 ವ್ಹೀಲಿಂಗ್ ಪ್ರಕರಣಗಳನ್ನು ದಾಖಲಿಸಿರುವುದಾಗಿ ತಿಳಿಸಿದ್ದಾರೆ.

2023ನೇ ವರ್ಷದಲ್ಲಿ ಒಟ್ಟು 216 ಪ್ರಕರಣಗಳು ದಾಖಲಾಗಿದ್ದವು. ಈಗ 2024ರಲ್ಲಿ ಕೇವಲ 6 ತಿಂಗಳಲ್ಲೇ 225 ಪ್ರಕರಣ ದಾಖಲಾಗಿದ್ದು, ವ್ಹೀಲಿಂಗ್ ಮಾಡುವವರಿಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸಿರುವ ಪರಿಣಾಮ ಒಂದು ವರ್ಷದಲ್ಲಿ ದಾಖಲಾಗಬಹುದಾದ ಪ್ರಕರಣಗಳು, ಕಳೆದ ಆರು ತಿಂಗಳ ಅವಧಿಯಲ್ಲೇ ದಾಖಲಾಗಿವೆ.

2024ರ ಜೂನ್ ಅಂತ್ಯಕ್ಕೆ 225 ವ್ಹೀಲಿಂಗ್ ಪ್ರಕರಣ ದಾಖಲಾಗಿದ್ದು, ಈ ಪೈಕಿ 93 ಪ್ರಕರಣಗಳಲ್ಲಿ 26 ಮಂದಿಯ ಆರ್ ಸಿ ಅಮಾನತಿನಲ್ಲಿಡಲಾಗಿದೆ. ಇನ್ನೂ 67 ಪ್ರಕರಣಗಳಲ್ಲಿ ಆರ್‌ ಸಿ ಅಮಾನತು ಸಂಬಂಧ ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ, 32 ಮಂದಿ ಸವಾರರ ಡಿಎಲ್ ರದ್ದತಿ ಕೋರಿ ಆರ್‌ಟಿಒಗೆ ಪತ್ರ ಬರೆಯಲಾಗಿತ್ತು. ಈ ಪೈಕಿ 9 ಮಂದಿ ಲೈಸೆನ್ಸ್ ರದ್ದುಗೊಳಿಸಲಾಗಿದ್ದು, 23 ಮಂದಿ ಸವಾರರ ಲೈಸೆನ್ಸ್ ಪರಿಶೀಲನೆ ಹಂತದಲ್ಲಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ವ್ಹೀಲಿಂಗ್ ಹಾಟ್‍ಸ್ಪಾಟ್‍ಗಳು: ಯುವಕರು ಸಂಚಾರ ದಟ್ಟಣೆಯಿಲ್ಲದ ಪ್ರದೇಶಗಳಲ್ಲಿ ವ್ಹೀಲಿಂಗ್ ಮಾಡುವುದು ಹೆಚ್ಚಾಗಿದೆ. ನಗರದ ಹೊರವರ್ತುಲ ರಸ್ತೆಗಳು, ಏರ್ ಪೋರ್ಟ್ ರೋಡ್, ನೈಸ್ ರಸ್ತೆ, ಸುಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ ರಸ್ತೆ ಹಾಗೂ ಮೇಲ್ಸೇತುವೆಗಳಲ್ಲಿ ವ್ಹೀಲಿಂಗ್ ಮಾಡುವುದಲ್ಲದೆ, ರೋಡ್ ರೇಜ್ ಪ್ರಕರಣಗಳಲ್ಲಿ ಭಾಗಿಯಾಗಿರುವ ನಿರ್ದಶನಗಳಿವೆ. ಇದರಿಂದ ಅಪಘಾತವಾಗಿ ಸಾವು-ನೋವುಗಳಿಗೂ ಕಾರಣವಾಗಿದೆ ಎಂದು ಸಂಚಾರ ಪೊಲೀಸ್ ವಿಭಾಗ ಮಾಹಿತಿ ನೀಡಿದೆ.

ಅಪ್ರಾಪ್ತರ ಕೈಗೆ ದ್ವಿಚಕ್ರ ವಾಹನ ನೀಡಿ, ಪೋಷಕರು ಹಾಗೂ ಮಾಲಕರು ಅವಾಂತರಗಳಿಗೆ ಕಾರಣರಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದರೆ ದ್ವಿಚಕ್ರ ವಾಹನ ಮಾಲಕರ ಪರವಾನಗಿ ರದ್ದು ಮಾಡುವುದಾಗಿ ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ವ್ಹೀಲಿಂಗ್ ಪ್ರಕರಣಗಳು..!

ವರ್ಷ - ಪ್ರಕರಣಗಳು

2022 - 283

2023 - 216

2024 - 225(ಜೂನ್ ಅಂತ್ಯಕ್ಕೆ)

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News