ಸಿಎ ನಿವೇಶನದಲ್ಲಿ ‘ಬಿರಿಯಾನಿ ವ್ಯಾಪಾರ’ ; ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕಾಂಗ್ರೆಸ್ ವಿನೂತನ ಪ್ರತಿಭಟನೆ

Update: 2024-09-04 16:05 GMT

ಬೆಂಗಳೂರು: ಪರಿಷತ್‍ನ ವಿಪಕ್ಷ ನಾಯಕ ಛಲವಾದಿ ನಾರಯಣಸ್ವಾಮಿ ಕೆಎಚ್‍ಬಿ ನಿರ್ದೇಶಕರಾಗಿದ್ದಾಗ ಶಿಕ್ಷಣ ಸಂಸ್ಥೆ ನಡೆಸುವುದಾಗಿ ಸುಮಾರು 25ಸಾವಿರ ಅಡಿಗಳಷ್ಟು ಸಿಎ ನಿವೇಶನವನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡು ಈ ನಿವೇಶನದಲ್ಲಿ ‘ಆನಂದ್ ಧಮ್ ಬಿರಿಯಾನಿ’ ವ್ಯಾಪರ ನಡೆಸುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಇಲ್ಲಿನ ಆನಂದರಾವ್ ವೃತ್ತದಲ್ಲಿನ ಕಾಂಗ್ರೆಸ್ ಭವನದ ಬಳಿ ಪ್ರತಿಭಟನೆ ನಡೆಸಿದ ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಮಾತನಾಡಿ, ‘ಛಲವಾದಿ ನಾರಾಯಣಸ್ವಾಮಿ ಪ್ರಾಮಾಣಿಕರಂತೆ ವರ್ತಿಸುತ್ತಾರೆ. ಆದರೆ ಅವರು 25 ಸಾವಿರ ಅಡಿಗಳಷ್ಟು ಭೂಮಿಯನ್ನ ಮಂಜೂರಾತಿ ಪಡೆದು ಈಗ ಅಲ್ಲಿ ವಾಣಿಜ್ಯ ಮಳಿಗೆ ಕಟ್ಟಡ ನಿರ್ಮಿಸಿ ‘ಧಮ್ ಬಿರಿಯಾನಿ ವ್ಯಾಪಾರ’ ನಡೆಸಲು ಅನುಮತಿ ನೀಡಿದ್ದಾರೆ.

ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಜಾಗ ಪಡೆದು ಬಿರಿಯಾನಿ ವ್ಯಾಪಾರ ಮಾಡುವ ನಾರಾಯಣಸ್ವಾಮಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕಿಸುವ ನೈತಿಕತೆ ಇಲ್ಲ ಎಂಬುದು ಮನಗಂಡು ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ವಿರೋಧ ಪಕ್ಷದ ನಾಯಕರಾಗಿ ನೀಡುವ ಹೇಳಿಕೆಗೆ ಗಾಂಭೀರ್ಯತೆ ಇರಬೇಕು. ಆದರೆ, ನಾರಾಯಣಸ್ವಾಮಿ ಕೇವಲ ವಿರೋಧ ಮಾಡಿಕೊಂಡು ಸರಕಾರ ಮತ್ತು ಮುಖ್ಯಮಂತ್ರಿಯನ್ನು ಟೀಕಿಸುವ ಇವರು ನಿಜವಾದ ಭ್ರಷ್ಟರನ್ನು ಬೆಂಬಲಿಸುವವರು ಎಂಬುದು ಸಾಬೀತಾಗಿದೆ ಎಂದು ತಿಳಿಸಿದರು.

ದಮ್ ಬಿರಿಯಾನಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿರುವ ಬಿಜೆಪಿಯ ಬಿರಿಯಾನಿ ಪಕ್ಷದವರು ಇನ್ನ ಮುಂದೆ ಶಿಕ್ಷಣ ಸಂಸ್ಥೆಯಲ್ಲಿ ಜನರಿಗೆ ವಂಚಿಸಿರುವ ಪ್ರಕರಣಗಳು ಒಂದೊಂದೇ ಬೆಳಕಿಗೆ ಬರುತ್ತಿದ್ದು ಕೂಡಲೇ ಬಿಜೆಪಿಯವರು ತಾವು ಪಡೆದಿರುವ ಎಲ್ಲ ಭೂಮಿಯನ್ನು ಸರಕಾರಕ್ಕೆ ಹಿಂದಕ್ಕೆ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಎ.ಆನಂದ್, ಜಿ.ಪ್ರಕಾಶ್, ಹೇಮರಾಜ್, ಆನಂದ್ ಕುಮಾರ್, ಉಮೇಶ್, ಚಂದ್ರಶೇಖರ್, ಪುಟ್ಟರಾಜು ನವೀನ್ ಸಾಯಿ, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News