ಬೆಂಗಳೂರು: ಆರೋಗ್ಯ ಇಲಾಖೆಯ ಅಧಿಕಾರಿ ಆತ್ಮಹತ್ಯೆ
ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಡ್ಯದಲ್ಲಿ ಕೆಲಸ ಮಾಡುತ್ತಿದ್ದ ಕುಣಿಗಲ್ ಮೂಲದ ನಟರಾಜ್ ಮೃತ ಅಧಿಕಾರಿಯಾಗಿದ್ದು, ಒಂದು ತಿಂಗಳಿಂದ ಅನಾರೋಗ್ಯ ಹಿನ್ನೆಲೆ ರಜೆಯಲ್ಲಿದ್ದ, ಅವರು ಇಂದು ಕೆಲಸಕ್ಕೆ ಹಾಜರಾಗುವಲ್ಲಿದ್ದರು. ಆದರೆ, ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅನುಮತಿ ನೀಡಿರಲಿಲ್ಲ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮನೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.
ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯ ಸ್ಪಷ್ಟನೆ:
ನನ್ನ ಕಿರುಕುಳದಿಂದ ನಟರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಸುಳ್ಳು ಆರೋಪ. ಅವರು ಅನಾರೋಗ್ಯ ಮತ್ತು ಕೌಟುಂಬಿಕ ಕಾರಣದಿಂದ ಖಿನ್ನತೆಗೆ ಒಳಗಾಗಿದ್ದರು.
ಮಾಧ್ಯಮಗಳ ಜತೆ ಮಾತನಾಡಿದ ಅವರು, ನಟರಾಜ್ ಬೇರೆ ಜಿಲ್ಲೆಯಿಂದ ಮಂಡ್ಯಕ್ಕೆ ಮೂರು ತಿಂಗಳ ಹಿಂದೆ ವರ್ಗಾವಣೆಯಾಗಿ ಬಂದಿದ್ದರು. ಒಂದು ತಿಂಗಳ ಹಿಂದೆ ಹೃದಯಾಘಾತವಾಗಿದೆ ಎಂದು ದೂರವಾಣಿ ಮೂಲಕ ಕರೆಮಾಡಿ ರಜೆ ಪಡೆದಿದ್ದರು ಎಂದರು.
ಈ ನಡುವೆ ಕಳೆದ ನ.16ರಂದು ಪತ್ರ ಬರೆದು ತಾನು ಮಂಡ್ಯದಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನನಗೆ ಮೊದಲಿದ್ದ ಜಾಗಕ್ಕೆ ವರ್ಗಾವಣೆ ಮಾಡಲು ಶಿಫಾರಸು ಮಾಡಿ ಎಂದು ನನಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಕುಣಿಗಲ್ ಶಾಸಕರಲ್ಲಿ ಮನವಿ ಮಾಡಿದ್ದರು ಎಂದು ಅವರು ವಿವರಿಸಿದರು.
ನಟರಾಜ್ ನಮ್ಮ ಕಚೇರಿಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಈ ಹಿಂದೆ ನಾಲ್ಕಾರು ಬಾರಿ ನಟರಾಜ್ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಅವರು ತೀವ್ರ ಖಿನ್ನತೆಗೊಳಗಾಗಿದ್ದರು. ಭ್ರೂಣ ಹತ್ಯೆ ಪ್ರಕರಣಕ್ಕೂ ಅವರ ಆತ್ಮಹತ್ಯೆಗೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.