ಅಪಘಾತಮುಕ್ತ ಹೊಸ ವರ್ಷಾಚರಣೆಗೆ ಕರೆ ನೀಡಿದ ಬೆಂಗಳೂರು ಸಂಚಾರಿ ಪೊಲೀಸರು

Update: 2023-12-26 13:54 GMT

ಬೆಂಗಳೂರು: ಹೊಸ ವರ್ಷಚರಣೆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು, ವಾಹನ ಸವಾರರು ಮತ್ತು ಪಾದಚಾರಿಗಳು ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾಕ್ರ್ಸ್ ರಸ್ತೆ, ಮತ್ತು ಚರ್ಚ್ ಸ್ಟ್ರೀಟ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಳ್ಳುವುದರಿಂದ ಸಾರ್ವಜನಿಕರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಕೆಲವು ಅಗತ್ಯ ಸೂಚನೆಗಳನ್ನು ತೆಗೆದುಕೊಂಡಿರುವುದಾಗಿ ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ವಾಹನ ಪ್ರವೇಶ ನಿರ್ಬಂಧಿತ ಸ್ಥಳಗಳು:

ಡಿ. 31ರ ಸಂಜೆ 4 ಗಂಟೆಯಿಂದ ಜ.1ರ ಬೆಳಗ್ಗೆ 3 ಗಂಟೆಯವರೆಗೂ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್ ವರೆಗೆ ನಿರ್ಬಂಧ ಹೇರಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬ್ರಿಗೇಡ್ ರಸ್ತೆಯ ಕಾವೇರಿ ಎಂಪೋರಿಯಂ ಜಂಕ್ಷನ್‌ ನಿಂದ ಒಪೇರಾ ಜಂಕ್ಷನ್ ವರೆಗೆ, ಚರ್ಚ್ ಸ್ಟ್ರೀಟ್ ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ, ಮ್ಯೂಸಿಯಂ ರಸ್ತೆಯ ಎಂ.ಜಿ.ರಸ್ತೆ ಜಂಕ್ಷನ್‌ ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆಯ (ಎಸ್.ಬಿ.ಐ) ವೃತ್ತದವರೆಗೆ ನಿರ್ಬಂಧ ಹೇರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೆಸ್ಟ್ ಹೌಸ್ ರಸ್ತೆಯ ಮ್ಯೂಸಿಯಂ ರಸ್ತೆ ಜಂಕ್ಷನ್‌ ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ ವರೆಗೆ, ರೆಸಿಡೆನ್ಸಿ ಕ್ರಾಸ್ ರಸ್ತೆಯ ರೆಸಿಡೆನ್ಸಿ ರಸ್ತೆ ಜಂಕ್ಷನ್‌ ನಿಂದ ಎಂ.ಜಿ ರಸ್ತೆ ಜಂಕ್ಷನ್ ವರೆಗೆ (ಶಂಕರ್ ನಾಗ್ ಚಿತ್ರಮಂದಿರ)ದವರೆಗೆ ಪೊಲೀಸ್ ವಾಹನಗಳು ಹಾಗು ಕರ್ತವ್ಯ ನಿರತ ತುರ್ತುಸೇವಾ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಪ್ರವೇಶಕ್ಕೆ ನಿರ್ಬಂಧವಿರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಾಹನಗಳ ಪಾರ್ಕಿಂಗ್ ನಿರ್ಬಂಧಿತ ಸ್ಥಳಗಳು:

ಎಂ.ಜಿ ರಸ್ತೆಯ ಅನಿಲ್ ಕುಂಬ್ಳೆ ವೃತದಿಂದ ಟ್ರಿನಿಟಿ ವೃತ್ತದವರೆಗೆ, ಬ್ರಿಗೇಡ್ ರಸ್ತೆಯ ಆಟ್ರ್ಸ್ ಅಂಡ್ ಕ್ರಾಫ್ಟ್ ಜಂಕ್ಷನ್‌ ನಿಂದ ಒಪೇರಾ ಜಂಕ್ಷನ್ ವರೆಗೆ, ಚರ್ಚ್ ಸ್ಟ್ರೀಟ್‌ ನ ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಸೆಂಟ್ ಮಾಕ್ರ್ಸ್ ರಸ್ತೆ ಜಂಕ್ಷನ್ ವರೆಗೆ, ರೆಸ್ಟ್ ಹೌಸ್ ರಸ್ತೆಯ ಬ್ರಿಗೇಡ್ ರಸ್ತೆ ಜಂಕ್ಷನ್‌ ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ ಹಾಗೂ ಮ್ಯೂಸಿಯಂ ರಸ್ತೆಯ ಎಂ.ಜಿ ರಸ್ತೆ ಜಂಕ್ಷನ್‌ ನಿಂದ ಹಳೆ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್.ಬಿ.ಐ) ವೃತ್ತದವರೆಗೆ ಪೊಲೀಸ್ ವಾಹನಗಳು ಹಾಗೂ ಕರ್ತವ್ಯ ನಿರತ ತುರ್ತುಸೇವಾ ವಾಹನಗಳನ್ನ ಹೊರತುಪಡಿಸಿ ಉಳಿದ ವಾಹನಗಳ ನಿಲುಗಡೆಗೆ ನಿಷೇಧ ಇರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸ್ಟ್ ಹೌಸ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ, ರಸ್ತೆ ಮತ್ತು ಸೆಂಟ್ ಮಾಕ್ರ್ಸ್ ರಸ್ತೆಗಳಲ್ಲಿ ಈಗಾಗಲೇ ನಿಲ್ಲಿಸಲಾಗಿರುವ ವಾಹನಗಳ ಚಾಲಕರು ಡಿಸೆಂಬರ್ 31ರಂದು ಸಂಜೆ 4 ಗಂಟೆಯೊಳಗೆ ತಮ್ಮ ವಾಹನಗಳನ್ನು ತೆರುವುಗೊಳಿಸದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಸಂಚಾರಿ ಪೊಲೀಸರು ಪ್ರಕಟನೆಯಲ್ಲಿ ಸೂಚಿಸಿದ್ದಾರೆ.

ಸಂಭ್ರಮಾಚರಣೆ ಮುಗಿಸಿ ತೆರಳುವವರಿಗೆ ಸೂಚನೆಗಳು:

ಡಿ.31 ರಂದು ರಾತ್ರಿ 10 ಗಂಟೆಯ ನಂತರ ಸಂಚರಿಸುವವರು ಎಂ.ಜಿ ರಸ್ತೆಯ ಕ್ಲೀನ್ಸ್ ವೃತ್ತದ ಕಡೆಯಿಂದ - ಹಲಸೂರು ಹಾಗು ಇನ್ನು ಮುಂದಕ್ಕೆ ಹೋಗುವವರು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್ -ಬಿ.ಆರ್.ವಿ ಜಂಕ್ಷನ್ ಬಲ ತಿರುವು ಕಬ್ಬನ್ ಮೂಲಕ ಸಂಚರಿಸಿ ವೆಬ್ ಜಂಕ್ಷನ್ ಬಳಿ ಎಂ.ಜಿ ರಸ್ತೆಯನ್ನು ಸೇರಿ ಮುಂದೆ ಸಾಗಬಹುದಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಹಲಸೂರು ಕಡೆಯಿಂದ ಕಂಟೋನ್ಮಂಟ್ ಕಡೆಗೆ ಹೋಗುವಂತಹ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ಹಲಸೂರು ರಸ್ತೆ- ಡಿಕೆನ್ಸನ್ ರಸ್ತೆ ಮಾರ್ಗವಾಗಿ ಸಂಚರಿಸಿ ಕಬ್ಬನ್ ರಸ್ತೆ ಸೇರಿ ಮುಂದೆ ಸಾಗಬಹುದು. ಕಾಮರಾಜ ರಸ್ತೆಯಲ್ಲಿ ಕಬ್ಬನ್ ರಸ್ತೆ ಜಂಕ್ಷನ್‌ ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ ವರೆಗೆ ವಾಹನಗಳ ನಿಲುಗಡೆಗೆ ಅವಕಾಶ ಇರಲಿದೆ. ಅಲ್ಲದೇ ಶಿವಾಜಿನಗರ ಬಿಎಂಟಿಸಿ ಶಾಫಿಂಗ್ ಕಾಂಪ್ಲೆಕ್ಸ್‌ ನ 1ನೇ ಮಹಡಿಯಲ್ಲಿ ವಾಹನಗಳ ನಿಲುಗಡೆಗೆ ಅವಕಾಶವಿರಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತಗಳನ್ನು ತಪ್ಪಿಸುವ ಉದ್ದೇಶದಿಂದ ಡಿ.31ರ ರಾತ್ರಿ 11ಗಂಟೆಯಿಂದ ಜನವರಿ 1ರ ಬೆಳಿಗ್ಗೆ 6 ಗಂಟೆಯವರೆಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮೇಲ್ಸೇತುವೆ ಹೊರತು ಪಡಿಸಿ ನಗರದ ಎಲ್ಲ ಮೇಲ್ಸೇತುವೆಗಳ ಮೇಲೆ ಎಲ್ಲ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದ್ದು, ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಹಾಗೂ ವೀಲಿಂಗ್, ಡ್ರಾಗ್ ರೇಸ್ ನಲ್ಲಿ ಭಾಗಿಯಾಗಿ ಇತರ ಸಾರ್ವಜನಿಕರಿಗೆ ಅನಾನುಕೂಲ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮತ್ತು ಇಂತಹ ಘಟನೆಗಳು ಕಂಡು ಬಂದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ 112ಗೆ ಮಾಹಿತಿ ನೀಡುವಂತೆ ಪೊಲೀಸರು ಸೂಚಿಸಿದ್ದಾರೆ.

ಸ್ನೇಹಿತರು ಗುಂಪಾಗಿ ಸಂಭ್ರಮಾಚರಣೆ ಮಾಡುವಾಗ, ನಂತರ ವಾಹನ ಚಾಲನೆ ಮಾಡುವವರು ಮದ್ಯಪಾನ ಮಾಡದಿರುವ ಹಾಗೆ ನೋಡಿಕೊಳ್ಳಿ. ನಿಮ್ಮ ಸ್ನೇಹಿತರನ್ನು ಅವರವರ ಮನೆಗಳಿಗೆ ಸುರಕ್ಷಿತವಾಗಿ ಸೇರುವಂತೆ ತನ್ನ ಮತ್ತು ಇತರ ವಾಹನಗಳು ಹಾಗೂ ಪಾದಚಾರಿಗಳ ಸುರಕ್ಷತೆ ಕಾಪಾಡುವಂತೆ, ಹೊಸ ವರ್ಷಾಚರಣೆಯನ್ನು ಅಪಘಾತ ಮುಕ್ತವಾಗಿ ಮಾಡುವಂತೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News