ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಕೆಲಸಕ್ಕೆ ಬಿಜೆಪಿ ಮೂರನೇ ಬಾರಿ ಕೈಹಾಕಿದೆ : ಬಿ.ಆರ್.ಪಾಟೀಲ್

Update: 2024-08-03 15:42 GMT

ಬೆಂಗಳೂರು : ಬಿಜೆಪಿ ಈ ಹಿಂದೆ ಎರಡು ಬಾರಿ ಹಿಂಬಾಗಿಲಿನಿಂದ ಅಧಿಕಾರ ಹಿಡಿದಿತ್ತು. ಇದೀಗ ಮೂರನೇ ಬಾರಿಯೂ ಅದೇ ಕೆಲಸಕ್ಕೆ ಕೈಹಾಕಿದೆ ಆದರೆ, ಬಿಜೆಪಿ ಅಧಿಕಾರ ಹಿಡಿಯುವುದು ತಿರುಕನ ಕನಸು ಎಂದು ಸಿಎಂ ರಾಜಕೀಯ ಸಲಹೆಗಾರ, ಹಿರಿಯ ಶಾಸಕ ಬಿ.ಆರ್.ಪಾಟೀಲ್ ತಿಳಿಸಿದ್ದಾರೆ.

ಶನಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ಎಲ್ಲಾ ಶಾಸಕರು ಒಟ್ಟಾಗಿದ್ದೇವೆ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಿದ್ದರಾಮಯ್ಯನವರ ಹಿಂದೆ ಎಲ್ಲಾ ಶಾಸಕರು ಮತ್ತು ಮಂತ್ರಿಗಳು ಗಟ್ಟಿಯಾಗಿ ನಿಂತಿದ್ದೇವೆ ಎಂದರು.

ಬಹುಮತದಿಂದ ಆಯ್ಕೆಯಾದ ಕಾಂಗ್ರೆಸ್ ಸರಕಾರವನ್ನು ಬಿಜೆಪಿಯವರು ಅಸ್ಥಿರಗೊಳಿಸಲು ಹೊರಟಿದ್ದಾರೆ. ಅದು ಫಲಿಸುವುದಿಲ್ಲ. ನಮ್ಮ ಕಾಂಗ್ರೆಸ್ ಸರಕಾರವು ಚುನಾವಣೆಗೆ ಮುಂಚಿತವಾಗಿ ನೀಡಿದಂತಹ ಎಲ್ಲಾ ಭರವಸೆಗಳನ್ನು ಈಡೇರಿಸಿದೆ ಎಂದು ಅವರು ತಿಳಿಸಿದರು.

ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಇದು ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ. ನಾವು ಬಿಜೆಪಿಯ ಬೆದರಿಕೆಗಳಿಗೆ ಜಗ್ಗುವುದಿಲ್ಲ, ಒಟ್ಟಾಗಿ ಎದುರಿಸುತ್ತೇವೆ. ರಾಜ್ಯಪಾಲರು ಸಾಂವಿಧಾನಿಕ ಹುದ್ದೆ. ಅವರು ಯಾರದು ಮಾತು ಕೇಳಿ ಸರಕಾರಕ್ಕೆ ನೋಟಿಸ್ ನೀಡಿದ್ದಾರೆ. ದೂರು ನೀಡಿದ ವ್ಯಕ್ತಿಯ ಹಿನ್ನೆಲೆ ತಿಳಿದುಕೊಳ್ಳಬೇಕಿತ್ತು ಎಂದು ಬಿ.ಆರ್.ಪಾಟೀಲ್ ಹೇಳಿದರು.

ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ‘ಇಡೀ ದೇಶದ ಅಹಿಂದ ವರ್ಗದ ನಾಯಕರಲ್ಲಿ ಭ್ರಷ್ಟಾತೀತ ನಾಯಕರು ಯಾರಾದರೂ ಇದ್ದರೆ, ಅದು ಸಿದ್ದರಾಮಯ್ಯ ಮಾತ್ರ. ಎಲ್ಲಾ ಪಕ್ಷದ ನಾಯಕರನ್ನು ಮುಂದೆ ಕೂರಿಸಿಕೊಂಡು ಈ ಮಾತನ್ನು ಧೈರ್ಯವಾಗಿ ಹೇಳಬಲ್ಲೆ ಎಂದರು.

ಅಹಿಂದ ವರ್ಗಗಳ ಮತಗಳನ್ನು ಹಾಗೂ ಎಲ್ಲಾ ವರ್ಗದ ಜನರನ್ನು ಸೆಳೆಯಬಲ್ಲಂತಹ ವ್ಯಕ್ತಿತ್ವ. ನಮ್ಮ ನಡುವಿನ ಜನಪ್ರಿಯ ನಾಯಕ ಸಿದ್ದರಾಮಯ್ಯನವರು. ಇವರ ತೇಜೋವಧೆ ಮಾಡುವ ಕೆಲಸಕ್ಕೆ ಬಿಜೆಪಿ ಇಳಿದಿದೆ, ಇದು ಖಂಡನೀಯ ಎಂದು ಎಲ್.ಹನುಮಂತಯ್ಯ ತಿಳಿಸಿದರು.

ಪರಿಷತ್ ಮಾಜಿ ಸದಸ್ಯ ವಿ.ಎಸ್.ಉಗ್ರಪ್ಪ ಮಾತನಾಡಿ, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಕೈವಾಡವಿಲ್ಲ ಎನ್ನುವುದಕ್ಕೆ ಅನೇಕ ಸಾಕ್ಷಿಗಳಿವೆ. ಸಿದ್ದರಾಮಯ್ಯನವರ ಮುಖಕ್ಕೆ ಕೆಸರು ಎರಚುವ ಅಪ್ರಮಾಣಿಕವಾದ ಕೆಲಸವನ್ನು ಬಿಜೆಪಿ ಮಾಡಲು ಹೊರಟಿದೆ. ರಾಜ್ಯಪಾಲರ ಭವನ ದುರ್ಬಳಕೆ ಮಾಡಿಕೊಂಡು ಬಿಜೆಪಿ ಕಳ್ಳಾಟ ನಡೆಸುತ್ತಿದೆ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News