ಉಪಚುನಾವಣೆ | ʼಗೃಹಲಕ್ಷ್ಮಿʼ ಹಣ ಬಿಡುಗಡೆಯು ನೀತಿ ಸಂಹಿತೆಯ ಉಲ್ಲಂಘನೆ : ವಿಜಯೇಂದ್ರ
ಬೆಂಗಳೂರು : ‘ಗೃಹಲಕ್ಷ್ಮಿ ಯೋಜನೆ’ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕುವ ಮೂಲಕ ಉಪಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ರಾಜ್ಯ ಸರಕಾರದ ವಿರುದ್ಧ ಈ ಕೂಡಲೇ ಚುನಾವಣಾ ಆಯೋಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದಾರೆ.
ಬುಧವಾರ ಎಕ್ಸ್ನಲ್ಲಿ ಸರಣಿ ಪೋಸ್ಟ್ ಹಾಕಿರುವ ಅವರು, ‘ಚುನಾವಣೆಗಳನ್ನು ಗೆಲ್ಲಲು ಯಾವ ರೀತಿಯ ಅಡ್ಡಮಾರ್ಗವನ್ನಾದರು ಹಿಡಿದು ಆಮಿಷವೊಡ್ಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು. ಶಿಗ್ಗಾಂವಿ ಕ್ಷೇತ್ರದ ಮತದಾರರನ್ನು ಸೆಳೆಯುವ ದೃಷ್ಟಿಯಿಂದ ಮಹಿಳೆಯರ ಖಾತೆಗಳಿಗೆ ಗೃಹಲಕ್ಷ್ಮಿ ಹಣ ಜಮೆ ಮಾಡಿ ಮತ ಸೆಳೆಯುವ ಹುನ್ನಾರ ನಡೆಸಿರುವುದು ವರದಿಯಾಗಿದೆ’ ಎಂದು ಉಲ್ಲೇಖಿಸಿದ್ದಾರೆ.
‘ಈ ಹಿಂದೆಯೂ ಲೋಕಸಭಾ ಚುನಾವಣೆಯ ಮುನ್ನಾ ದಿನ 3ತಿಂಗಳ ಗೃಹಲಕ್ಷ್ಮಿ ಹಣ ಜಮೆ ಮಾಡಿ ಮತ ಸೆಳೆಯಬಹುದೆಂಬ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ಸಿಗರಿಗೆ ನಾಡಿನ ಜನ ತಕ್ಕ ಪಾಠ ಕಲಿಸಿದ್ದರು. ಇದೀಗ ಉಪಚುನಾವಣೆಯಲ್ಲೂ ಅಡ್ಡಮಾರ್ಗದ ಮೂಲಕ ಜನರ ಕಿವಿಗೆ ಹೂ ಇಡುವ ಪ್ರಯತ್ನಕ್ಕೆ ಮುಂದಾಗಿರುವ ಭ್ರಷ್ಟ ಸರಕಾರಕ್ಕೆ ಜನರೇ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.
ಅವಮಾನ :
ಸೋತಾಗ ಇವಿಎಂ ಹಾಗೂ ಚುನಾವಣಾ ಆಯೋಗವನ್ನೇ ಅನುಮಾನಿಸುವುದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ದೂಷಿಸುವುದು ಕಾಂಗ್ರೆಸ್ ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಬಗೆ. ಆದರೆ ಈಗ ಮುಡಾ ಹಗರಣದ ಕಪ್ಪುಮಸಿ ಬಳಿದುಕೊಂಡು ನ್ಯಾಯಾಂಗ ವ್ಯವಸ್ಥೆಯಿಂದ ಅಪರಾಧಿ ಸ್ಥಾನದಲ್ಲಿ ಇರುವ ಭಂಡ ಸಿಎಂ ಸಿದ್ದರಾಮಯ್ಯರ ಸುಪುತ್ರ ಪರಿಷತ್ ಸದಸ್ಯ ಡಾ.ಯತೀಂದ್ರ ಕೆಲ ಕೋರ್ಟ್ಗಳು ಕೇಂದ್ರ ಸರಕಾರದ ಮಾತು ಕೇಳುತ್ತಿವೆಂದು ಹೇಳುವ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆಯನ್ನೇ ಅವಮಾನಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
‘ಜನಪ್ರತಿನಿಧಿಗಳ ನ್ಯಾಯಾಲಯ ತಮ್ಮ ತಂದೆಯ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ, ತನಿಖೆಗೆ ಆದೇಶ ನೀಡಿದ ಕಾರಣಕ್ಕೆ ಹತಾಶೆಯಿಂದ ನ್ಯಾಯಾಂಗ ವ್ಯವಸ್ಥೆಯನ್ನೇ ಅನುಮಾನಿಸಿ ನಿಂದಿಸುವ ಹೇಳಿಕೆ ನೀಡಿರುವ ಯತೀಂದ್ರ ಅವರು ತಾವೊಬ್ಬ ಸಿಎಂ ಪುತ್ರ ಎಂಬ ಹಮ್ಮಿನಿಂದ ಮಾತನಾಡಿದಂತಿದೆ. ಪರಿಷತ್ ಸದಸ್ಯ ಸ್ಥಾನದ ಘನತೆಯನ್ನೂ ಕಳೆದಿದ್ದಾರೆ, ಈ ದೇಶದಲ್ಲಿ ನ್ಯಾಯಾಗ ವ್ಯವಸ್ಥೆ, ಸಂವಿಧಾನ ಅನುಮಾನಿಸಿ, ಅಪಮಾನಿಸಿದವರಿಗೆ ಕಾಲವೇ ಉತ್ತರ ಹೇಳಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.