ಸಿದ್ದರಾಮಯ್ಯನವರು ಮತ್ತೊಬ್ಬ ಅರವಿಂದ್ ಕೇಜ್ರಿವಾಲ್ ಆಗಲು ಹೋಗದಿರಲಿ : ಛಲವಾದಿ ನಾರಾಯಣಸ್ವಾಮಿ

Update: 2024-08-18 15:40 GMT

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೊಬ್ಬ ಅರವಿಂದ್ ಕೇಜ್ರಿವಾಲ್ ಆಗಲು ಹೋಗದಿರಲಿ ಎಂದು ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಲಹೆ ನೀಡಿದ್ದಾರೆ.

ರವಿವಾರ ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದೇಶದಲ್ಲಿ ಒಬ್ಬರು ಕೇಜ್ರಿವಾಲ್ ಅನ್ನು ನಾವು ಈಗಾಗಲೇ ನೋಡಿದ್ದೇವೆ. ಹಲವು ತಿಂಗಳಿಂದ ಜೈಲಿನಿಂದ ಅವರು ರಾಜ್ಯ ನಡೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಇಂತಹ ವ್ಯವಸ್ಥೆ ನಮ್ಮಲ್ಲಿ ಇರಬಾರದು ಎಂದು ನುಡಿದರು.

ಸಿದ್ದರಾಮಯ್ಯನವರೇ, ನಿಮ್ಮ ಭ್ರಷ್ಟಾಚಾರ ಬಯಲಾಗಿದೆ. ದಲಿತರ ಭೂಮಿಗೆ ಮುಖ್ಯಮಂತ್ರಿ ಕುಟುಂಬಕ್ಕೆ ಪರಿಹಾರ. ಈ ದೇಶದಲ್ಲಿ ಮೊದಲನೇ ಸಾರಿ ಎಂದು ನನಗೆ ಅನಿಸಿದೆ. ಭೂಮಿಯೇ ನಿಮ್ಮದಲ್ಲ, 14 ನಿವೇಶನ ನಿಮಗೆ ಬೇಕೇ? ಇದರಿಂದ ನಿಮ್ಮ ಅಂತರಂಗ ಎಷ್ಟು ಭ್ರಷ್ಟಾಚಾರದಿಂದ ಕೂಡಿದೆ ಎಂಬುದು ತಿಳಿಯುವಂತಾಗಿದೆ ಎಂದು ಅವರು ಟೀಕಿಸಿದರು.

ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕೇ ಹೊರತು ಬೀದಿಯಲ್ಲಿ ಹೋರಾಟ ಮಾಡಬಾರದು. ಸಂವಿಧಾನವನ್ನು ಕೈಯಲ್ಲೇ ಹಿಡಿದು ಓಡಾಡುವ ಪಕ್ಷದವರು ನೀವು. ಮಾತೆತ್ತಿದರೆ ಡಾ.ಅಂಬೇಡ್ಕರರ ಕುರಿತು ಭಾಷಣ ಮಾಡುತ್ತೀರಿ. ಪ್ರಜಾಪ್ರಭುತ್ವದ ಕುರಿತು ಹೆಚ್ಚಾಗಿ ಮಾತನಾಡುತ್ತೀರಿ. ಅದರ ಪ್ರಕಾರ ಸಿಎಂ ಅವರು ನಡೆದುಕೊಳ್ಳುತ್ತಾರಾ? ಎಂದು ಅವರು ಪ್ರಶ್ನಿಸಿದರು.

ಮೂಗಿನ ನೇರಕ್ಕಷ್ಟೇ ಯೋಚಿಸುವ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮೂಗಿನ ನೇರಕ್ಕೆ ಮಾತ್ರ ಯೋಚಿಸುವವರು ಎಂದು ಪರಿಷತ್ ಸದಸ್ಯ ಎನ್.ರವಿಕುಮಾರ್ ಆಕ್ಷೇಪಿಸಿದರು.

ಹಂಸರಾಜ್ ಭಾರದ್ವಾಜ್ ಈ ಹಿಂದೆ ಯಡಿಯೂರಪ್ಪ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದನ್ನು ಸಿದ್ದರಾಮಯ್ಯನವರು ಸ್ವಾಗತಿಸಿದ್ದರು. ಇಂದಿನ ಗವರ್ನರ್ ತೆಗೆದುಕೊಂಡ ಕ್ರಮದ ಬಗ್ಗೆ ವಿರೋಧಿಸುತ್ತಾರೆ? ಅವತ್ತು ಸಂವಿಧಾನ ಬೇರೆ ಇತ್ತೇ? ಈವತ್ತಿನ ಸಂವಿಧಾನ ಬೇರೆ ಇದೆಯೇ? ಅದೇ ಸಂವಿಧಾನ ಅಲ್ಲವೇ? ಅದೇ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 17 ‘ಎ’ ಅಲ್ಲವೇ? ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News