ರಾಹುಲ್ ಗಾಂಧಿಗೂ, ಕಾಂಗ್ರೆಸ್ಸಿಗೂ ಬುದ್ಧಿ ಕಲಿಸಬೇಕಾಗಿದೆ : ಛಲವಾದಿ ನಾರಾಯಣಸ್ವಾಮಿ

Update: 2024-09-11 15:19 GMT

ಬೆಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕದಲ್ಲಿದ್ದು ಮೀಸಲಾತಿ ರದ್ದು ಮಾಡುವ ಹೇಳಿಕೆ ಕೊಟ್ಟಿದ್ದಾರೆ. ಅವರ ಹೇಳಿಕೆಯಿಂದ ದೇಶಾದ್ಯಂತ ವಿರೋಧ ಪಕ್ಷಗಳು, ದಲಿತ ಸಮುದಾಯಗಳು ಕುಪಿತಗೊಂಡಿವೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.

ಬುಧವಾರ ನಗರದ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಈಗ ರಾಹುಲ್ ಅವರ ಹೇಳಿಕೆಗೆ ಉತ್ತರ ಕೊಡಲಾಗದೆ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಥಮ ಪ್ರಧಾನಿ ನೆಹರೂ ಅವರು ಆ ಕಾಲದಲ್ಲೇ ಇದನ್ನು ಹೇಳಿದ್ದರು. ಮೀಸಲಾತಿ ಸರಿಯಾದ ಕ್ರಮ ಅಲ್ಲ, ಇದೊಂದು ಅನಿಷ್ಟ. ಇದರಿಂದ ದೇಶ ಉದ್ಧಾರವಾಗದು. ಇದರ ಬಗ್ಗೆ ನನಗೆ ಒಲವಿಲ್ಲ ಎಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು ಎಂದು ವಿವರಿಸಿದರು.

ರಾಹುಲ್ ಗಾಂಧಿ ಮಾನಸಿಕ ಅಸ್ವಸ್ಥರಂತೆ ಭಾರತದ ಮಾನಹಾನಿ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆಗಿಂದಾಗ್ಗೆ ದೇಶದ ಮಾನಹಾನಿ ಮಾಡುವುದನ್ನು ನಾವು ಗಮನಿಸುತ್ತಿದ್ದೇವೆ. ರಾಹುಲ್ ಗಾಂಧಿಗೂ, ಕಾಂಗ್ರೆಸ್ಸಿಗೂ ಬುದ್ಧಿ ಕಲಿಸಬೇಕಾಗಿದೆ. ಈ ದೇಶದ ಮಣ್ಣಿನಿಂದ ಹೊರಗಡೆ ಹೋದ ತಕ್ಷಣ ಭಾರತವನ್ನು ಅಪಮಾನ ಮಾಡುತ್ತಾ ಇರುತ್ತಾರೆ. ಇವತ್ತೂ ಅದನ್ನೇ ಮುಂದುವರೆಸಿದ್ದಾರೆ ಎಂದು ನಾರಾಯಣಸ್ವಾಮಿ ದೂರಿದರು.

ರಾಹುಲ್‍ಗಾಂಧಿ ವಿಪಕ್ಷ ನಾಯಕರಾಗಲು ಯೋಗ್ಯರೇ? ಇವರಿಗೆ ಎಂಥ ಪಾಠ ಕಲಿಸಬೇಕು?. 2014, 2019ರಲ್ಲಿ ಅಧಿಕೃತ ವಿಪಕ್ಷ ಸ್ಥಾನ ಇರದ ಕಾರಣ ರಾಹುಲ್ ವಿಪಕ್ಷ ನಾಯಕರಾಗಲಿಲ್ಲ. ಈ ಬಾರಿ ಅಧಿಕೃತ ವಿಪಕ್ಷ ಸ್ಥಾನ ಸಿಕ್ಕಿದಾಗ ಬೇರೆಲ್ಲರನ್ನೂ ಬದಿಗೆ ಸರಿಸಿ ವಿಪಕ್ಷ ನಾಯಕರಾಗಿದ್ದಾರೆ. ಆದರೆ, ಅವರು ಈ ಸ್ಥಾನಕ್ಕೆ ಅರ್ಹರಲ್ಲ ಎಂದು ಅವರು ಹೇಳಿದರು.

ಮೀಸಲಾತಿ ಯಾವ ಕಾರಣಕ್ಕೆ ಬಂದಿದೆ? ಬಡತನ ಎಂದರೇನೆಂಬುದು ಗೊತ್ತಿದೆಯೇ?, ನೀವೆಲ್ಲರೂ ಶ್ರೀಮಂತಿಕೆಯಿಂದ ಮೆರೆಯುತ್ತಿದ್ದೀರಿ. ಬಡವರ ಬಗ್ಗೆ ಚಿಂತನೆ, ಶ್ರೇಯೋಭಿವೃದ್ಧಿ ಬಯಸುವುದು ಬಿಟ್ಟು, ಮೀಸಲಾತಿ ತೆಗೆಯುವುದಾದರೆ ನಿಮ್ಮ ಕಾಂಗ್ರೆಸ್ ಪಕ್ಷ ದೇಶದಿಂದಲೆ ಹೋಗಲಿದೆ. ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ನಾವು ಜನರನ್ನು ಸಜ್ಜುಗೊಳಿಸುತ್ತೇವೆ ಎಂದು ನಾರಾಯಣಸ್ವಾಮಿ ತಿಳಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News