ಆರೋಗ್ಯಕರ ಚರ್ಚೆ, ಟೀಕೆಗಳಿಂದ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ : ಸಿಎಂ ಸಿದ್ದರಾಮಯ್ಯ

Update: 2024-10-11 10:26 GMT

ಮೈಸೂರು : ʼಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಸೌಭಾಗ್ಯವನ್ನು ರಾಜ್ಯದ ಜನ ಹಲವು ಬಾರಿ ಒದಗಿಸಿಕೊಟ್ಟಿದ್ದಾರೆ. ತಾಯಿಯ ಆಶೀರ್ವಾದ ನನ್ನ ಮೇಲೆ ಸದಾ ಇರುವ ಕಾರಣದಿಂದಲೇ ದೀರ್ಘಕಾಲದಿಂದ ರಾಜಕೀಯದಲ್ಲಿ ಇರಲು ಸಾಧ್ಯವಾಗಿದೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶುಕ್ರವಾರ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಜ್ಯದ ಜನತೆಗೆ ದಸರೆಯ ಶುಭ ಕೋರಿದ ಮುಖ್ಯಮಂತ್ರಿಗಳು, ನಾಳೆ ಮೈಸೂರಿನಲ್ಲಿ ನಡೆಯುವ ಜಂಬೂಸವಾರಿ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ʼರಾಜಕೀಯದಲ್ಲಿ ತೆಗಳುವವರು, ಹೊಗಳುವವರು ಇರುತ್ತಾರೆ. ಶತ್ರುಗಳೂ , ಅಭಿಮಾನಿಗಳೂ ಇರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ನನ್ನನ್ನು ಸಹಮತಿಸಲೇಬೇಕೆಂಬ ಭಾವನೆ ನನಗಿಲ್ಲ. ಒಟ್ಟಾರೆ ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ, ಟೀಕೆಗಳು ನಡೆದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆʼ ಎಂದರು.

ದಸರಾ ಉತ್ಸವದ ಬಗ್ಗೆ ಪತ್ರಿಕೆಗಳಲ್ಲಿ ವತಿಯಿಂದ ಪ್ರಕಟವಾದ ಸರ್ಕಾರದ ಜಾಹಿರಾತಿನ ಬಗ್ಗೆ ತಮ್ಮ ಅಭಿಪ್ರಾಯ ನೀಡುತ್ತಾ, "ದುಷ್ಟರಿಗೆ ಶಿಕ್ಷೆ, ಶಿಷ್ಟರ ರಕ್ಷೆಯನ್ನು ದಸರೆಯ ಪ್ರತೀಕ. ವಿಜಯನಗರ ಅರಸರ ಜಯದ ಸಂಕೇತವಾಗಿ ಪ್ರಾರಂಭಿಸಲಾದ ಆಯುಧಪೂಜೆ ದಸರಾ ಉತ್ಸವವನ್ನು ಮೈಸೂರು ಒಡೆಯರ್ ರವರು ಮುಂದುವರೆಸಿದ್ದು, ಇಂದಿಗೂ ಆ ಪರಂಪರೆಯನ್ನು ಪಾಲಿಸಲಾಗುತ್ತಿದೆ" ಎಂದರು.

ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೋರಾಟ ಹಮ್ಮಿಕೊಳ್ಳುತ್ತಿರುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, "ಸರ್ಕಾರಕ್ಕೆ ಕೆಲವು ಮೊಕದ್ದಮೆಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇರುತ್ತದೆ. ಗೃಹಸಚಿವರು ಈ ಉಪಸಮಿತಿಯ ನೇತೃತ್ವ ವಹಿಸಿದ್ದು, ಸಮಿತಿಯ ವಿವೇಚನೆಯಂತೆ ಪ್ರಕರಣದ ದೂರನ್ನು ಹಿಂದಕ್ಕೆ ಪಡೆದಿದೆ. ಆದಾಗ್ಯೂ ಈ ವಿಚಾರವಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತೇನೆ" ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News