ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು: ಆರ್‌.ಅಶೋಕ್

Update: 2024-03-29 10:31 GMT

ಬೆಂಗಳೂರು, ಮಾ.29: ಯತೀಂದ್ರ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವರ ಬಗ್ಗೆ ನೀಡಿದ ಹೇಳಿಕೆ ವಿರುದ್ಧ ಬಿಜೆಪಿ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು. ಯತೀಂದ್ರ ಹೀಗೆಯೇ ಮಾತನಾಡುತ್ತಿದ್ದರೆ ರಾಹುಲ್‌ ಗಾಂಧಿಯಂತೆ ಜೈಲಿಗೆ ಹೋಗುವ ಸ್ಥಿತಿ ಬರಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಮಗ ಎನ್ನುವ ಕಾರಣಕ್ಕೆ ಹಾಗೂ ರಾಷ್ಟ್ರ ನಾಯಕರ ಬಗ್ಗೆ ಮಾತನಾಡಿದರೆ ದೊಡ್ಡ ವ್ಯಕ್ತಿಯಾಗುತ್ತೇನೆ, ಇದರಿಂದ ಬೆಲೆ ಬರುತ್ತದೆ ಎನ್ನುವ ಕಾರಣಕ್ಕೆ ಯತೀಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕುರಿತು ಟೀಕೆ ಮಾಡಿದ್ದಾರೆ. ಹತಾಶ ಮನೋಭಾವ, ಬುದ್ಧಿಭ್ರಮಣೆ ಹಾಗೂ ಅಪ್ರಬುದ್ಧತೆಯಿಂದ ಅವರು ಮಾತನಾಡಿದ್ದಾರೆ. ಅವರ ಪ್ರಜ್ಞೆಯ ಮಟ್ಟ ಬಹಳ ಕಡಿಮೆ ಇದೆ ಎಂದು ಟೀಕಿಸಿದರು.

ಮೈಸೂರಿನ ರಾಜಕಾರಣದ ಬಗ್ಗೆ ಮಾತನಾಡಲು ಯತೀಂದ್ರರಿಗೆ ಯೋಗ್ಯತೆ ಇಲ್ಲ. ಅಲ್ಲಿನ ರಾಜಕಾರಣ ಬಿಟ್ಟು ಕೇಂದ್ರದ ರಾಜಕಾರಣದ ಬಗ್ಗೆ ಅವರು ಮಾತನಾಡಿದ್ದಾರೆ. ಇಂತಹ ಬಾಲಿಶ ಹಾಗೂ ಕೊಬ್ಬಿನ ಹೇಳಿಕೆ ನೀಡುವುದು ಕಾಂಗ್ರೆಸ್ಸಿನ ಡಿಎನ್‌ಎ ನಲ್ಲೇ ಇದೆ. ಈಗಾಗಲೇ ರಾಹುಲ್‌ ಗಾಂಧಿ ಬಾಲಿಶ ಹೇಳಿಕೆ ನೀಡಿ ಜೈಲಿಗೆ ಹೋಗುವ ಸ್ಥಿತಿ ಬಂದಿದೆ. ಯತೀಂದ್ರ ಅವರೂ ಹೀಗೆ ಮಾತನಾಡುತ್ತಿದ್ದರೆ ಕೊನೆಗೆ ಜೈಲೇ ಗತಿಯಾಗಲಿದೆ. ಅವರು ಎಚ್ಚರದಿಂದ ಮಾತನಾಡಲಿ ಎಂದರು.

ಸಿಎಂ ಸಿದ್ದರಾಮಯ್ಯ ಗೂಂಡಾಗುರು

ಯತೀಂದ್ರ ಅವರಿಗೆ ತಮ್ಮ ತಂದೆಯ ಗೂಂಡಾಗಿರಿ ಮಾತ್ರ ಕಣ್ಣಿಗೆ ಕಾಣುವುದಿಲ್ಲ. ರಾಜ್ಯದಲ್ಲೀಗ ಅಪ್ಪ-ಮಕ್ಕಳ ಗೂಂಡಾಗಿರಿ ಜಾರಿಯಲ್ಲಿದೆ. ಪ್ರಧಾನಿಗೆ ಹೊಡೆಯುತ್ತೇನೆ ಎನ್ನುವವರು ನಿಜವಾದ ಗೂಂಡಾಗಳು. ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ. ಆದರೆ ಇವರು ನಡೆಸುವುದು ರಾವಣ ರಾಜ್ಯ. ಯತಿ ಎಂದರೆ ಸನ್ಯಾಸಿ. ಆದರೆ ಇವರ ಬಾಯಲ್ಲಿ ಬರುವ ಮಾತು ರಾಕ್ಷಸನಂತಿದೆ. ಇವರ ಹೆಸರಿಗೂ ಮಾತಿಗೂ ಸಂಬಂಧವೇ ಇಲ್ಲ ಎಂದರು.

ಸಮನ್ವಯ ಸಭೆ

ಬಿಜೆಪಿ-ಜೆಡಿಎಸ್‌ ಹಾಲು ಜೇನಿನಂತೆ ಕೆಲಸ ಮಾಡುತ್ತಿದೆ. ಇನ್ನಷ್ಟು ಚೆನ್ನಾಗಿ ಕಾರ್ಯನಿರ್ವಹಿಸಲು ಸಮನ್ವಯ ಸಭೆಗಳನ್ನು ನಡೆಸಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಸಭೆ ನಡೆಸಲಾಗುವುದು ಎಂದು ಆರ.ಅಶೋಕ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News