ಪಂಪನಿಂದ ಕುವೆಂಪು ವರೆಗಿನ ಕೃತಿಗಳು ಎಷ್ಟು ಮುಖ್ಯವೋ ದಲಿತ ಸಾಹಿತ್ಯವು ಅಷ್ಟೇ ಮುಖ್ಯ : ಡಾ.ಬಂಜೆಗೆರೆ ಜಯಪ್ರಕಾಶ್

Update: 2024-11-09 17:24 GMT

ಡಾ.ಬಂಜೆಗೆರೆ ಜಯಪ್ರಕಾಶ್

ಬೆಂಗಳೂರು : ಪಂಪನಿಂದ ಹಿಡಿದು ಕುವೆಂಪುವರೆಗೂ ರಚಿಸಿದ ಕೃತಿಗಳು ಎಷ್ಟು ಮುಖ್ಯವೋ ದಲಿತ ಸಾಹಿತ್ಯವು ಅಷ್ಟೇ ಮುಖ್ಯ ಎಂದು ಸಂಸ್ಕೃತಿ ಚಿಂತಕ ಡಾ.ಬಂಜೆಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಬಸವನಗುಡಿಯ ಎನ್.ಎಚ್.ಮಲ್ಟಿಮೀಡಿಯಾ ಹಾಲ್ನಲ್ಲಿ ನಡೆದ ನ್ಯಾಷನಲ್ ಕಾಲೇಜು ಸಾಹಿತ್ಯ ಹಬ್ಬ ಕಾರ್ಯಕ್ರಮದಲ್ಲಿ ‘ದಲಿತ ಬಂಡಾಯ ಸಾಹಿತ್ಯ ಅವಲೋಕನ’ ಎಂಬ ವಿಷಯ ಕುರಿತು ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ದಲಿತ ಸಾಹಿತ್ಯವು ಪ್ರಮುಖ ಘಟ್ಟವಾಗಿದೆ ಎಂದರು.

ದಲಿತ ಸಂವೇದನೆಯ ಅಭಿವ್ಯಕ್ತಿಗೆ ಮತ್ತು ದಲಿತ ಪರ ಕಾಳಜಿಗೆ ಬಹುದೊಡ್ಡ ವೇದಿಕೆ ದೊರಕಿದ್ದು 12ನೇ ಶತಮಾನದ ವಚನ ಚಳುವಳಿಯ ಕಾಲಘಟದಲ್ಲಿ. ಹಾಗೆ ನೋಡಿದರೆ ವಚನ ಚಳುವಳಿಯ ಮುಖ್ಯ ಕಾಳಜಿಯೇ ದಲಿತ ಲೋಕ. ಅಸಂಖ್ಯಾತ ದಲಿತ ಶರಣರ ಅಭಿವ್ಯಕ್ತಿಗೆ ಮಾಧ್ಯಮವಾಗಿದ್ದು ಅನುಭವ ಮಂಟಪ ಎಂದು ಅವರು ತಿಳಿಸಿದರು.

ದಲಿತ ಬಂಡಾಯ ಸಾಹಿತ್ಯವು ಮೇಲು-ಕೀಳು, ಬಡವ-ಶ್ರೀಮಂತ, ಸಾಮಾಜಿಕ ನ್ಯಾಯ, ವರ್ಣ ವರ್ಗ, ಅಸ್ಪಶ್ಯತೆ, ಶೋಷಣೆ ಮತ್ತು ಹಸಿವಿನ ಬಗ್ಗೆ ಒತ್ತು ಕೊಟ್ಟು ರಾಮಮನೋಹರ ಲೋಹಿಯಾ, ಅಂಬೇಡ್ಕರ್, ಗಾಂಧಿ, ಮಾವೋ, ಜ್ಯೋತಿಬಾಪುಲೆ ಮೊದಲಾದವರ ಸೈದ್ಧಾಂತಿಕ ಚಿಂತನೆಯ ಬೆಳಕಿನಲ್ಲಿ ಬದುಕನ್ನು ಹಸನುಗೊಳಿಸುವ ನೆಲೆಗಳಿಗೆ ನುಡಿಕೊಟ್ಟಿತು ಎಂದು ಬಂಜೆಗೆರೆ ಜಯಪ್ರಕಾಶ್ ಹೇಳಿದರು.

ಲೇಖಕಿ ಡಾ.ಲಲಿತಾಂಬಾ ಮಾತನಾಡಿ, ಜೈನ ಧರ್ಮ ಕನ್ನಡಕ್ಕೆ ಕೊಟ್ಟ ಕೊಡುಗೆಯ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಆಯಾಮಗಳ ಮೂಲಕ ಜೈನ ಕೃತಿಗಳನ್ನು ನೋಡುವ ಸಾಧ್ಯತೆಗಳ ಕುರಿತು ಚರ್ಚಿಸಿದರು.

ಕಾರ್ಯಕ್ರಮದಲ್ಲಿ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಡಾ.ಎಚ್.ಎನ್.ಸುಬ್ರಮಣ್ಯ, ಕಾರ್ಯದರ್ಶಿಗಳಾದ ವೆಂಕಟಶಿವಾರೆಡ್ಡಿ ಮತ್ತು ಅರುಣ್ ಕುಮಾರ್, ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಚೇರ್ಮನ್ ರಾಮಮೋಹನ್, ಬಸವನಗುಡಿಯ ನ್ಯಾಷನಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಬಿ.ಎಸ್.ಸೌಮ್ಯ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News