ಸುದ್ದಿಗಳ ವೈಭವೀಕರಣ ಮಾಡಬೇಡಿ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-08-30 16:40 GMT

ಬೆಂಗಳೂರು : ಸುದ್ದಿಗಳನ್ನು ವೈಭವೀಕರಣ ಮಾಡಬೇಡಿ. ವಾಸ್ತವ ಸಂಗತಿಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಮನಗರ ಜಿಲ್ಲಾ ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ವೇಗ ಮಾಧ್ಯಮಕ್ಕಿಂತಲೂ ಹೆಚ್ಚಾಗಿದೆ. ‘ಸಿಟಿಜನ್ ಜರ್ನಲಿಸಂ’ ಎಂಬ ಪರಿಕಲ್ಪನೆ ಆರಂಭವಾಗಿದ್ದು, ಹಳ್ಳಿಯಲ್ಲಿರುವವರು ತಮ್ಮ ವಿಚಾರವನ್ನು ತಾವೇ ವಿಡಿಯೋ ಮಾಡಿ ಪೋಸ್ಟ್ ಮಾಡುವ ವ್ಯವಸ್ಥೆ ಸೃಷ್ಟಿಯಾಗಿದೆ. ಹಾಗಾಗಿ ಮಾಧ್ಯಮಗಳಲ್ಲಿ ಸ್ಪರ್ಧೆ ಹೆಚ್ಚಾಗಿದೆ ಎಂದು ಹೇಳಿದರು.

ಟಿವಿ ಮತ್ತು ಯೂಟೂಬ್ ಚಾನೆಲ್‍ಗಳು ಹೆಚ್ಚಾಗಿದ್ದು, ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಾಮಾಣಿಕವಾಗಿರುವ ಮಾಧ್ಯಮಗಳಿಗೆ ಸಮಾಜ ಗೌರವ ನೀಡುತ್ತದೆ. ಹೀಗಾಗಿ ಪತ್ರಕರ್ತರು ಬಹಳ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದರು.

ತುಂಗಾಭದ್ರ ಅಣೆಕಟ್ಟೆ ಕ್ರಸ್ಟ್‌ ಗೇಟ್ ಮುರಿದಾಗ ವಿರೋಧ ಪಕ್ಷಗಳ ನಾಯಕರು ನಮ್ಮ ವಿರುದ್ಧ ಮುಗಿಬಿದ್ದರು. ನನ್ನಿಂದಲೇ ಗೇಟ್ ಮುರಿದಿರುವಂತೆ ಮಾತನಾಡಿದರು. ನಾನು ಆಗ ಅವರಿಗೆ ಉತ್ತರ ನೀಡಲಿಲ್ಲ. ಐದು ದಿನಗಳಲ್ಲೇ ಗೇಟ್ ದುರಸ್ತಿ ಮಾಡಿಸಿದೆವು. ಆಗ ನಾನು ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ ಎಂದು ಉತ್ತರ ಕೊಟ್ಟಿದ್ದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮತ್ತೆ ಆಣೆಕಟ್ಟು ತುಂಬಲಿದೆ ಎಂದರು.

ಮಾಧ್ಯಮಗಳಲ್ಲಿ ಅಪರಾಧ ಹಾಗೂ ಸಿನೆಮಾ ಸುದ್ದಿಗಳೇ ವೈಭವೀಕೃತ ಆಗುತ್ತಿವೆ. ಹೀಗಾಗಿ ಅವುಗಳನ್ನೇ ಹೆಚ್ಚಾಗಿ ತೋರಿಸುತ್ತೇವೆ ಎಂದು ನನ್ನ ಅನೇಕ ಮಾಧ್ಯಮ ಸ್ನೇಹಿತರೇ ಹೇಳಿದ್ದಾರೆ. ನೀವು ನಿಮ್ಮ ಆತ್ಮಬಲ ಕಳೆದುಕೊಳ್ಳಬೇಡಿ. ಮನುಷ್ಯ ಸಾಯುವ ಮುನ್ನ ಮಾಡುವ ಸಾಧನೆ ಮತ್ತು ಆದರ್ಶ ಇಟ್ಟುಕೊಂಡು ಬದುಕುವುದು ಬಹಳ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕಾರ್ಯದರ್ಶಿ ಮತ್ತಿಕೆರೆ ಜಯರಾಂ, ಸೋಮಶೇಖರ ಕೆರಗೋಡು, ಜಿಲ್ಲಾ ಅಧ್ಯಕ್ಷ ಸೂರ್ಯಪ್ರಕಾಶ್, ಪ್ರಧಾನ ಕಾರ್ಯದರ್ಶಿ ಶಿವರಾಜ ಮತ್ತಿತರರು ಉಪಸ್ಥಿತರಿದ್ದರು.

ಸಂಘಕ್ಕೆ ನಿವೇಶನ: ಪತ್ರಕರ್ತರ ಸಮಸ್ಯೆಗಳ ವಿಚಾರವಾಗಿ ಮನವಿ ಪತ್ರ ನೀಡಿದ್ದು, ಅದಕ್ಕಾಗಿ ರಾಮನಗರ ಪತ್ರಕರ್ತರ ಸಂಘಕ್ಕೆ ಸ್ಥಳದಲ್ಲಿಯೇ ನಿವೇಶನ ಮಂಜೂರು ಮಾಡಿ ಆದೇಶಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದೇನೆ. ಶೀಘ್ರ ‘ಪತ್ರಿಕಾ ಭವನ’ ನಿರ್ಮಾಣ ಮಾಡಿ. ಭವನಕ್ಕೂ ಪ್ರತ್ಯೇಕವಾಗಿ 25 ಲಕ್ಷ ರೂ. ಅನುದಾನ ಕೊಡಿಸುತ್ತೇನೆ. ಈಗಾಗಲೇ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 10 ಲಕ್ಷ ರೂ. ಘೋಷಣೆ ಮಾಡಿದ್ದು ಅದನ್ನು ಶೀಘ್ರದಲ್ಲೆ ನೀಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News