ರುಕ್ಸಾನಾ ಬರ್ಬರ ಹತ್ಯೆಯು ಬಿಜೆಪಿಯವರ ಕಣ್ಣಿಗೆ ಕ್ರೌರ್ಯದ ಪರಮಾವಧಿ ಎನಿಸಲಿಲ್ಲವೇ? : ದಿನೇಶ್ ಗುಂಡೂರಾವ್
ಬೆಂಗಳೂರು : ಹುಬ್ಬಳ್ಳಿಯ ನೇಹಾ ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವ ಬಿಜೆಪಿಯವರು, ಮಾ.31ರಂದು ಪ್ರದೀಪ್ ಎಂಬಾತ ತಾನು ಪ್ರೀತಿಸುತ್ತಿದ್ದ ರುಕ್ಸಾನಾ ಎಂಬ ಮಹಿಳೆಯನ್ನು ಬರ್ಬರವಾಗಿ ಕೊಂದು ತುಮಕೂರಿನಲ್ಲಿ ಸುಟ್ಟು ಹಾಕಿದ ಬಗ್ಗೆ ಈವರೆಗೆ ಯಾಕೆ ಸೊಲ್ಲೆತ್ತಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಹುಬ್ಬಳ್ಳಿಯಲ್ಲಿ ನಿನ್ನೆ ನಡೆದಿರುವ ನೇಹಾ ಹಿರೇಮಠ್‍ರ ಬರ್ಬರ ಕೊಲೆ ಯಾವುದೇ ಕಾರಣಕ್ಕೂ ಕ್ಷಮಾರ್ಹವಲ್ಲ. ಅದೇ ರೀತಿ ಈ ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವ ರಾಜ್ಯ ಬಿಜೆಪಿಯವರ ನಡೆಯೂ ಕೂಡ ಕ್ಷಮಾರ್ಹವಲ್ಲ ಎಂದು ತಿಳಿಸಿದ್ದಾರೆ.
ನೇಹಾ ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವ ಬಿಜೆಪಿಯವರಿಗೆ ಒಂದು ಪ್ರಶ್ನೆಯಿದೆ. ಕಳೆದ ಮಾ.31ರಂದು ಪ್ರದೀಪ್ ಎಂಬಾತ ತಾನು ಪ್ರೀತಿಸುತ್ತಿದ್ದ 22 ವರ್ಷದ ರುಕ್ಸಾನಾ ಎಂಬ ಮಹಿಳೆಯನ್ನು ಬರ್ಬರವಾಗಿ ಕೊಂದು ತುಮಕೂರಿನಲ್ಲಿ ಸುಟ್ಟು ಹಾಕಿದ್ದ. ಜೊತೆಗೆ ಆಕೆಯ ಎಳೆಯ ಮಗುವನ್ನು ಬೆಂಗಳೂರಿನ ಕೈಗಾಡಿಯೊಂದರ ಮೇಲೆ ಅನಾಥವಾಗಿ ಮಲಗಿಸಿ ಹೋಗಿದ್ದ. ಈ ಬಗ್ಗೆ ಬಿಜೆಪಿಯವರು ಇಲ್ಲಿಯವರೆಗೂ ಸೊಲ್ಲೆತ್ತಿಲ್ಲ. ಬಿಜೆಪಿಯವರ ಕಣ್ಣಿಗೆ ಈ ಪ್ರಕರಣ ಕ್ರೌರ್ಯದ ಪರಮಾವಧಿ ಎನ್ನಿಸಲಿಲ್ಲವೇ.? ಎಂದು ಅವರು ಕೇಳಿದ್ದಾರೆ.
ಫಯಾಝ್ ಎಂಬ ಕ್ರಿಮಿಯಿಂದ ಹತ್ಯೆಯಾದ ನೇಹಾ ಹಾಗೂ ಪ್ರದೀಪ್ ಎಂಬ ದುರುಳನಿಂದ ಕೊಲೆಯಾದ ರುಕ್ಸಾನಾ ಎರಡೂ ಹೆಣ್ಣು ಜೀವಗಳೆ. ಹತ್ಯೆಯಾದ ನೇಹಾ ಪ್ರಕರಣವನ್ನು ರಾಜಕೀಯಗೊಳಿಸಿ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವ ಬಿಜೆಪಿಯವರು ರುಕ್ಸಾನಾ ಪ್ರಕರಣದಲ್ಲೂ ಇದೇ ರೀತಿ ವರ್ತಿಸಿದ್ದರೆ ಭೇಷ್ ಎನ್ನಬಹುದಿತ್ತು ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೊಲೆಯಾದ ರುಕ್ಸಾನಾಳ ಬಗ್ಗೆ ಚುರುಕ್ ಎನ್ನದ ಬಿಜೆಪಿಯವರ ಕರುಳು ನೇಹಾ ವಿಚಾರದಲ್ಲಿ ಮಾತ್ರ ಯಾಕೆ ಹೆಂಗರುಳಾಗಿದೆ.? ಕೊಲೆಯಾದವರ ಹಾಗೂ ಕೊಲೆ ಮಾಡಿದವರ ಧರ್ಮ ಇದಕ್ಕೆ ಕಾರಣವಲ್ಲವೇ.? ಎಂದು ಅವರು ಹೇಳಿದ್ದಾರೆ.
ನೇಹಾ ಪ್ರಕರಣದಲ್ಲಿ ರಾಜ್ಯ ಬಿಜೆಪಿಯವರದ್ದು ಮೊಸಳೆ ಕಣ್ಣೀರೆ ಹೊರತು ಬೇರೆನೂ ಅಲ್ಲ. ನೇಹಾ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿ ಕಾನೂನಿನ ಕುಣಿಕೆ ತೊಡಿಸಿದ್ದಾರೆ. ಇಂತಹ ಹೀನ ಕೃತ್ಯ ಎಸಗಿದ ಫಯಾಝ್ ಎಂಬ ದುರುಳನಿಗೆ ಗರಿಷ್ಠ ಶಿಕ್ಷೆಯಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿರಬೇಕು ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಹೆಣದ ಮೇಲೆ ರಾಜಕೀಯ ಮಾಡುವುದಲ್ಲ. ಹೀಗೆ ರಾಜಕೀಯ ಮಾಡುವುದರಿಂದ ನೊಂದ ನೇಹಾ ಕುಟುಂಬ ಇನ್ನಷ್ಟು ದುಃಖ ಹಾಗೂ ಮಾನಸಿಕ ಆಘಾತಗೊಳಗಾಗಲಿದೆ ಎಂಬ ಕನಿಷ್ಠ ಪ್ರಜ್ಞೆ ಬಿಜೆಪಿಯವರಿಗಿರಬೇಕು. ತೀರಾ ವಾಕರಿಕೆ ಬರುವಂತೆ ವರ್ತಿಸಬಾರದು ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.