‘ತಾನೇ ಎಲ್ಲಾ, ತನ್ನಿಂದಲೇ ಎಲ್ಲಾ' ಎನ್ನುತ್ತಿದ್ದ ಮೋದಿಗೆ ಚುನಾವಣಾ ಫಲಿತಾಂಶದಿಂದ ಮರ್ಮಾಘಾತ : ದಿನೇಶ್ ಗುಂಡೂರಾವ್
ಬೆಂಗಳೂರು: ‘ತಾನೇ ಎಲ್ಲಾ, ತನ್ನಿಂದಲೇ ಎಲ್ಲಾ' ಎಂದು ಮೆರೆದಾಡುತ್ತಿದ್ದ ನರೇಂದ್ರ ಮೋದಿಯವರಿಗೆ ಈ ಬಾರಿಯ ಚುನಾವಣಾ ಫಲಿತಾಂಶ ಮರ್ಮಾಘಾತ ನೀಡಿದೆ. ಬಿಜೆಪಿಯನ್ನು 370 ಹಾಗೂ ಎನ್‍ಡಿಎಯನ್ನು 400ರ ಗಡಿ ದಾಟಿಸುವುದಾಗಿ ಮೋದಿ ಅಹಂಕಾರದಲ್ಲಿ ಮೆರೆಯುತ್ತಿದ್ದರು. ವಿಪರ್ಯಾಸವೆಂದರೆ ಮೋದಿಗೆ ತಮ್ಮ ಪಕ್ಷ ಬಿಜೆಪಿಯನ್ನೇ ಸರಳ ಬಹುಮತದ ಸಮೀಪ ತರಲು ಸಾಧ್ಯವಾಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಬಹುಮತವಿಲ್ಲದೆ ಮತ್ತೆ ಪ್ರಧಾನಿಯಾಗಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಜುಟ್ಟು ಜನಿವಾರವನ್ನು ಮಿತ್ರಪಕ್ಷಗಳ ಮರ್ಜಿಯಲ್ಲಿಟ್ಟು ಆಡಳಿತ ನಡೆಸುವ ಸ್ಥಿತಿಗೆ ತಲುಪಿದ್ದಾರೆ ಎಂದು ಅವರು ಹೇಳಿದ್ದಾರೆ.
2024ರ ಚುನಾವಣೆ ಬಿಜೆಪಿಯವರ ಪಾಲಿಗೆ ಸಂಪೂರ್ಣ ಮೋದಿಮಯವಾಗಿತ್ತು. ‘ವಿಶ್ವಗುರು', 'ವಿಶ್ವನಾಯಕ' ಎಂದು ತಮ್ಮ ಅಂಧಭಕ್ತರಿಂದ ಬಹುಪರಾಕ್ ಹಾಕಿಸಿಕೊಳ್ಳುತ್ತಿದ್ದ ಹಾಗೂ ತನ್ನನ್ನು ‘ದೇವಮಾನವ' ಎಂದು ಸ್ವಯಂ ಘೋಷಿಸಿಕೊಂಡಿದ್ದ ಮೋದಿಯವರ ಜನಪ್ರಿಯತೆ ಇನ್ನಿಲ್ಲದಂತೆ ಕುಸಿದಿರುವುದಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯ ಅಭ್ಯರ್ಥಿಗಳು ಪ್ರಚಾರದಲ್ಲಿ ಅಭಿವೃದ್ಧಿ ವಿಚಾರ ಪ್ರಸ್ತಾಪ ಮಾಡಿದಕ್ಕಿಂತ ಮೋದಿಯ ಅಲೆಯಲ್ಲೇ ಗೆಲ್ಲುವ ಪ್ರಯತ್ನ ಮಾಡಿದ್ದರು. 2019 ರಲ್ಲಿ 303 ಸ್ಥಾನ ಗೆಲ್ಲುವ ಮೂಲಕ ಸ್ವಂತ ಬಲದಿಂದ ಅಧಿಕಾರ ನಡೆಸಿದ ಬಿಜೆಪಿ ಈ ಬಾರಿ ಕೇವಲ 240 ಸ್ಥಾನ ಗಳಿಸಿ 63 ಸ್ಥಾನ ಕಳೆದುಕೊಂಡಿದೆ. ಮೋದಿ ದೇಶದ ಜನರಿಗೆ ಅಪ್ರಸ್ತುತರಾಗಿದ್ದಾರೆ ಎಂಬ ಸ್ಪಷ್ಟ ಸಂದೇಶವಿದು ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಸಾಂವಿಧಾನಿಕ ಸಂಸ್ಥೆಗಳ ಅನೈತಿಕ ಬೆಂಬಲವಿಲ್ಲದೆ ಹೋಗಿದ್ದರೆ ಬಿಜೆಪಿ ನೂರೈವತ್ತರ ಗಡಿಯನ್ನೂ ದಾಟುತ್ತಿರಲಿಲ್ಲ. ಹಾಗಾಗಿ ಇದು ಮೋದಿಯವರ ವೈಯಕ್ತಿಕ ಸೋಲು ಎಂದು ಅವರು ತಿಳಿಸಿದ್ದಾರೆ.