ಬಿಬಿಎಂಪಿಯ ಕನ್ನಡ ವಿರೋಧಿ ಧೋರಣೆ ವಿಷಾದನೀಯ : ಡಾ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು: ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಬೇಕಾದ ಬಿಬಿಎಂಪಿ ವಿವಿಧ ಕಾರಣಗಳಿಂದ ಕನ್ನಡ ವಿರೋಧಿ ಎಂದು ಸಾರ್ವಜನಿಕ ವಲಯದಲ್ಲಿ ನಕಾರಾತ್ಮಕವಾಗಿ ಪ್ರತಿಬಿಂಬಿತವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು, ಕೂಡಲೇ ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸೂಚನೆ ನೀಡಿದ್ದಾರೆ.
ಶನಿವಾರ ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ರಸ್ತೆ ನಾಮಫಲಕಗಳಲ್ಲಿ ತಪ್ಪಾದ ಕನ್ನಡ ಪದಗಳನ್ನು ಬಳಸಲಾಗುತ್ತಿರುವುದು, ಪಾಲಿಕೆಯೇ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಕನ್ನಡದ ಶೀರ್ಷಿಕೆಗಳು ಕಾಣೆಯಾಗುತ್ತಿರುವುದು ಕನ್ನಡದ ಹಿತ ಕಾಯಬೇಕಾದ ಸಂಸ್ಥೆಯಿಂದ ಆಗಬೇಕಾದ ಕೆಲಸಗಳಲ್ಲ ಎಂದು ತಿಳಿಸಿದ್ದಾರೆ.
ಕನ್ನಡ ಪರ ಕೆಲಸಗಳಿಗೆ ಅಧಿಕಾರಿಗಳ ಪಾತ್ರ ಪ್ರಮುಖವಾಗಿದ್ದು, ಪಾಲಿಕೆಯ ಸಾರ್ವಜನಿಕ ಸೇವಾ ವಿಭಾಗಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಕನ್ನಡ ಭಾಷೆ ಸಾಹಿತ್ಯದ ಜ್ಞಾನ ಮತ್ತು ಅಭಿಮಾನ ಹೊಂದಿರಬೇಕಾಗುತ್ತದೆ. ಇಂತಹ ವಿಭಾಗಗಳಿಗೆ ಕಡ್ಡಾಯವಾಗಿ ಕನ್ನಡದ ಒಲವುಳ್ಳ ಅಧಿಕಾರಿಗಳನ್ನು ನೇಮಿಸಿ ಎಂದು ಸೂಚಿಸಿದ್ದಾರೆ.
ಇಂತಹ ಪ್ರಮಾದಗಳಿಗೆ ಕಾರಣರಾಗಿರುವ ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆಯನ್ನು ನೀಡಬೇಕು. ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಹಾಗೂ ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಪ್ರಾಧಿಕಾರಕ್ಕೆ ವರದಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.