ಕೆಪಿಎಸ್‍ಸಿ ಕಾರ್ಯಶೈಲಿಯಲ್ಲಿ ಸುಧಾರಣೆ ಸ್ವಾಗತಾರ್ಹ : ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯಶೈಲಿಯಲ್ಲಿ ಸರಕಾರವು ಸುಧಾರಣೆ ತರಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರಂತರ ಆಗ್ರಹವನ್ನು ಮತ್ತು ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿದ್ದು, ಸರಕಾರದ ಈ ಕ್ರಮವು ಅಸಂಖ್ಯ ಕನ್ನಡ ಮಾದ್ಯಮ ಅಭ್ಯರ್ಥಿಗಳ ಉದ್ಯೋಗಾಕಾಂಕ್ಷೆಯನ್ನು ಸಾಕಾರವಾಗಿಸುವಲ್ಲಿ ಉತ್ತಮ ನಡೆಯಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರಕಾರದ ಭಾಷಾಂತರ ಇಲಾಖೆ, ವಿವಿಧ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲಿ ಪ್ರತಿಭಾನ್ವಿತ ಶಿಕ್ಷಣ ತಜ್ಞರುಗಳು ಕಾರ್ಯನಿರ್ವಹಿಸುತ್ತಿದ್ದು, ಇವರುಗಳ ಸೇವೆಯನ್ನು ಬಳಸಿಕೊಂಡಲ್ಲಿ ಲೋಕಸೇವಾ ಆಯೋಗವು ಉತ್ತಮ ಹೆಸರನ್ನು ಪಡೆಯಬಹುದು. ಈಗ ಸರಕಾರವು ಕನ್ನಡದಲ್ಲಿಯೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ನಿರ್ದೇಶನವನ್ನು ನೀಡಲು ಮುಂದಾಗಿರುವುದು ಅಸಂಖ್ಯ ಕನ್ನಡಿಗ ಉದ್ಯೋಗಾರ್ಥಿಗಳಿಗೆ ವಿಶ್ವಾಸ ತುಂಬುವ ಪ್ರಯತ್ನವಾಗಿದೆ ಎಂದು ಡಾ.ಬಿಳಿಮಲೆ ಹೇಳಿದ್ದಾರೆ.
ಸ್ವಾಯತ್ತ ಸಂಸ್ಥೆಯ ಹಣೆಪಟ್ಟಿಯೇ ಕನ್ನಡಕ್ಕೆ ವಿರೋಧಿಯಾಗಿರುವುದು ವಿಷಾದನೀಯ. ಸರಕಾರದ ಶುದ್ಧೀಕರಣ ತೀರ್ಮಾನವು ಸಂಸ್ಥೆಯ ವೃತ್ತಿಪರತೆಯನ್ನು ಹೆಚ್ಚಿಸುವಂತಾದರೆ ಅದು ಕನ್ನಡದ ನಿಜವಾದ ಸೇವೆ ಎನ್ನಬಹುದಾಗಿದೆ. ಕೇಂದ್ರ ಲೋಕಸೇವಾ ಆಯೋಗವು ಪ್ರತಿ ವರ್ಷ ನಡೆಸುವ ಪರೀಕ್ಷೆಗಳಲ್ಲಿ ಒಮ್ಮೆಯೂ ಪ್ರಮಾದ ಉಂಟಾಗದೆ ಇರಲು ಸಾಧ್ಯವಾದರೆ ಕೆಪಿಎಸ್ಸಿಯಲ್ಲಿ ಇದು ಏಕೆ ಸಾಧ್ಯವಿಲ್ಲ. ಸರಕಾರದ ತೀರ್ಮಾನವು ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ ಹೊಸ ಶಕೆ ಆರಂಭವಾಗಲಿ ಎಂದು ತಿಳಿಸಿದ್ದಾರೆ.
ಆರೋಗ್ಯ ಸಚಿವರ ಕನ್ನಡಪರ ನಿಲುವು ಅಭಿನಂದನೀಯ: ಆರೋಗ್ಯ ಇಲಾಖೆಯ ಆಡಳಿತದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಜಾರಿಗೆ ತರಲು ವೈಯಕ್ತಿಕ ಗಮನಹರಿಸಿ ರಾಜ್ಯ ಸರಕಾರದ ಎಲ್ಲ ಪತ್ರ ವ್ಯವಹಾರಗಳನ್ನು, ಆದೇಶಗಳನ್ನು ಕನ್ನಡದಲ್ಲಿಯೇ ಹೊರಡಿಸಲಾಗುವುದು ಎಂದು ಪ್ರಾಧಿಕಾರಕ್ಕೆ ವರದಿ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಅವರ ನಿಲುವನ್ನು ಡಾ. ಪುರುಷೋತ್ತಮ ಬಿಳಿಮಲೆ ಸ್ವಾಗತಿಸಿದ್ದಾರೆ.
ಆರೋಗ್ಯ ಸಚಿವರ ಈ ಕನ್ನಡಪರ ನಿಲುವು ಬೇರೆ ಇಲಾಖೆಗಳಿಗೆ ಮಾದರಿಯಾಗಬೇಕು. ಸರಕಾರದ ಎಲ್ಲ ಇಲಾಖೆಗಳ ಆಡಳಿತದಲ್ಲಿ ಕನ್ನಡದ ಅನುಷ್ಠಾನ ಸಂಪೂರ್ಣವಾದರೆ ಜನಸಾಮಾನ್ಯರಲ್ಲಿ ಸರಕಾರದ ಬಗ್ಗೆ ಭರವಸೆ ಮೂಡುವುದು ಸಹಜ ಎಂದು ಹೇಳಿದ್ದಾರೆ.