ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರೂ ಸಮಾನತೆ ಮರೀಚಿಕೆ: ಮೂಡ್ನಾಕೂಡು ಚಿನ್ನಸ್ವಾಮಿ

Update: 2024-01-26 16:33 GMT

ಬೆಂಗಳೂರು: ಭಾರತ ದೇಶವು ಸರ್ವ ಸಮಾನತೆಯ ಪ್ರತೀಕವಾದ ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷಗಳೇ ಕಳೆದರೂ ಜಾತಿಪದ್ಧತಿ ಇನ್ನೂ ಜೀವಂತವಾಗಿದ್ದು, ಅಸ್ಪೃಶ್ಯತೆ ಆಚರಣೆಯು ತಾಂಡವಾಡುತ್ತಿದೆ ಎಂದು ಪ್ರಗತಿಪರ ಚಿಂತಕ ಮೂಡ್ನಾಕೂಡು ಚಿನ್ನಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದ ಕ್ವೀನ್ಸ್‍ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯ ಸಭಾಂಗಣದಲ್ಲಿ ದಸಂಸ(ಭೀಮವಾದ) ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಕರ್ನಾಟಕ ಇವರ ಸಹಯೋಗದಲ್ಲಿ ಗಣರಾಜ್ಯ ದಿನದ ಅಂಗವಾಗಿ ಆಯೋಜಿಸಿದ್ದ ‘ಸಂವಿಧಾನ ಉಳಿಸಿ-ದೇಶ ಉಳಿಸಿ' ರಾಜ್ಯಮಟ್ಟದ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಜಾತ್ಯತೀತ ಹಾಗೂ ಧರ್ಮಾತೀತ ನೆಲೆಯಲ್ಲಿ ಸಂವಿಧಾನ ರೂಪಿಸಿ ದೇಶದ ಪ್ರಗತಿಗೆ ಭದ್ರ ಬುನಾದಿ ಹಾಕಿದರು. ಆದರೆ ಮನುವಾದಿ ಮನಸ್ಥಿತಿಗಳು ಅಂದಿನಿಂದ ಇಂದಿನವರೆಗೆ ಸಂವಿಧಾನ ವಿರೋಧಿ ಕೃತ್ಯಗಳ ಮೂಲಕ ಸಂವಿಧಾನವನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.

ನಟ, ಚಿಂತಕ ಚೇತನ್ ಅಹಿಂಸಾ ಮಾತನಾಡಿ, ಅಂಬೇಡ್ಕರ್ ಅವರು ಕನಸು ಕಂಡಂತೆ ಆಳುವ ವರ್ಗವಾಗಿ ದಮನಿತ ಸಮುದಾಯಗಳು ಒಂದಾಗಬೇಕು. ವಿಶ್ವಮಾನವ ಸಂದೇಶ ಸಾರಿದ ಬುದ್ಧ, ಬಸವ, ಕನಕ, ಕುವೆಂಪು ಅವರಂತಹ ದಾರ್ಶನಿಕರ ವಿಚಾರಧಾರೆಗಳು ಒಂದು ಪ್ರಾಂತ್ಯ, ಭಾಷೆ, ದೇಶಗಳಿಗೆ ಸೀಮಿತವಾಗದೆ ಜಾಗತಿಕ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅನುಸಂಧಾನಗೊಳಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ದಸಂಸ ರಾಜ್ಯ ಸಂಚಾಲಕ ಆರ್.ಮೋಹನ್‍ರಾಜ್ ಮಾತನಾಡಿ, ಅಂಬೇಡ್ಕರ್ ಕಂಡ ಪ್ರಬುದ್ಧ ಭಾರತದ ಆಶಯ ಹಾಗೂ ಸಂವಿಧಾನದ ಮೌಲ್ಯಗಳ ಮಹತ್ವದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ರಾಜು ಎಂ,ತಳವಾರ್, ಸ್ವಪ್ನ ಮೋಹನ್, ಶೇಖರ್ ಹಾವಂಜೆ, ಜಿ.ಶಿವಕುಮಾರ್, ಡಾ.ಕೆ.ಎ.ಓಬಳೇಶ್ ಹಾಗೂ ಪರಶುರಾಮ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News