ಬೆಂಗಳೂರು | ತಾಜ್ ವೆಸ್ಟ್ ಎಂಡ್ ಹೋಟೆಲ್‍ಗೆ ಹುಸಿ ಬಾಂಬ್ ಬೆದರಿಕೆ
ಬೆಂಗಳೂರು : ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರತಿಷ್ಠಿತ ತಾಜ್ ವೆಸ್ಟ್ ಎಂಡ್ ಹೋಟೆಲ್‍ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಇದೊಂದು ಹುಸಿ ಬಾಂಬ್ ಬೆದರಿಕೆಯಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಬಾಂಬ್ ಬೆದರಿಕೆ ಸಂದೇಶದ ಬಗ್ಗೆ ತಕ್ಷಣ ಎಚ್ಚೆತ್ತ ಹೋಟೆಲ್ ಸಿಬ್ಬಂದಿ ಹೈಗ್ರೌಂಡ್ಸ್ ಠಾಣೆ ಪೊಲೀಸರಿಗೆ ಮಾಹಿತಿ ರವಾನಿಸಿದರು. ಗಣ್ಯರು, ಕ್ರಿಕೆಟಿಗರು ಉಳಿದುಕೊಳ್ಳುವ ಹಾಗೂ ಹೆಚ್ಚಾಗಿ ಉದ್ಯಮಿಗಳು, ರಾಜಕಾರಣಿಗಳು ಸಭೆ ನಡೆಸುವ ಪ್ರತಿಷ್ಠಿತ ಹೋಟೆಲ್‍ಗೆ ಬೆದರಿಕೆಯೊಡ್ಡಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಮಾಹಿತಿ ನೀಡಿದ ಉಪ ಪೊಲೀಸ್ ಆಯುಕ್ತ(ಕೇಂದ್ರ) ಶೇಖರ್ ಎಚ್. ತೆಕ್ಕಣ್ಣವರ್, ಶನಿವಾರ ಬೆಳಗ್ಗೆ ತಾಜ್ ವೆಸ್ಟ್ ಎಂಡ್ ಹೋಟೆಲ್‍ನ ಇಮೇಲ್‍ಗೆ ಕಿಡಿಗೇಡಿಗಳಿಂದ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಇದನ್ನು ಆಧರಿಸಿ ಪರೀಶೀಲನೆ ನಡೆಸಿದಾಗ ಹೋಟೆಲ್‍ನಲ್ಲಿ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ, ಮೇಲ್ನೋಟಕ್ಕೆ ಇದೊಂದು ಹುಸಿ ಬಾಂಬ್ ಬೆದರಿಕೆ. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು.