ಬೆಂಗಳೂರು| ಎಟಿಎಂಗೆ ತುಂಬಿಸಬೇಕಿದ್ದ ಹಣ ಕಳ್ಳತನವಾಗಿದೆಯೆಂದು ಸುಳ್ಳು ದೂರು: ಎಟಿಎಂ ನಿರ್ವಹಣೆ ಕಂಪೆನಿಯ ಸಿಬ್ಬಂದಿ ಸೇರಿ ಐವರ ಬಂಧನ
ಬೆಂಗಳೂರು: ಎಟಿಎಂಗೆ ತುಂಬಿಸಬೇಕಿದ್ದ ಹಣವನ್ನು ತುಂಬದೆಯೇ, ಕಳ್ಳತನವಾಗಿದೆಯೆಂದು ಸುಳ್ಳು ದೂರು ನೀಡಿದ್ದ ಪ್ರಕರಣದಡಿ ಎಟಿಎಂ ನಿರ್ವಹಣೆ ಕಂಪೆನಿಯ ಸಿಬ್ಬಂದಿ ಸೇರಿ ಐವರು ಆರೋಪಿಗಳನ್ನು ಇಲ್ಲಿನ ಬೆಳ್ಳಂದೂರು ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಎಟಿಎಂ ನಿರ್ವಹಣಾ ಕಂಪೆನಿಯಾಗಿರುವ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಬಂಧಿತ ಐವರು ಆರೋಪಿಗಳ ವಿಚಾರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಸರ್ಜಾಪುರ ರಸ್ತೆಯ ದೊಡ್ಡ ಕನ್ನಹಳ್ಳಿಯ ಖಾಸಗಿ ಬ್ಯಾಂಕ್‍ನ ಎಟಿಎಂನಲ್ಲಿ ಜು.6ರಂದು ಘಟನೆ ನಡೆದಿತ್ತು. ಬೆಡ್‍ಶೀಟ್ ಸುತ್ತಿಕೊಂಡು ಬಂದಿದ್ದ ಆರೋಪಿಗಳು, ಮೊದಲು ಎಟಿಎಂ ಯಂತ್ರ ಇರುವ ಕೊಠಡಿಯ ಸಿಸಿಟಿವಿ ಕ್ಯಾಮರಾಗಳಿಗೆ ಕಪ್ಪು ಸ್ಪ್ರೇ ಹೊಡೆದು ನಂತರ ಗ್ಯಾಸ್ ಕಟರ್ ಬಳಸಿ ಎಟಿಎಂ ಕ್ಯಾಶ್ ಬಾಕ್ಸ್ ಕತ್ತರಿಸಿ ನಗದು ದೋಚಿ ಪರಾರಿಯಾಗಿದ್ದರು. ಎಟಿಎಂ ಯಂತ್ರದಲ್ಲಿದ್ದ 16.56 ಲಕ್ಷ ರೂ. ನಗದನ್ನು ದೋಚಿ ಕಳ್ಳರು ಪರಾರಿಯಾಗಿರುವುದಾಗಿ ಬೆಳ್ಳಂದೂರು ಠಾಣೆಗೆ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ಕಂಪೆನಿಯ ಪ್ರತಿನಿಧಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಠಾಣಾ ಪೊಲೀಸರು, ತನಿಖೆ ನಡೆಸಿದಾಗ ಆರೋಪಿಗಳು ಎಟಿಎಂ ಯಂತ್ರದಲ್ಲಿದ್ದ ಸುಮಾರು 6,500 ರೂ. ನಗದನ್ನಷ್ಟೇ ಕಳ್ಳತನ ಮಾಡಿರುವುದು ಪತ್ತೆಯಾಗಿತ್ತು. ಅನುಮಾನದ ಹಿನ್ನೆಲೆ ಮತ್ತಷ್ಟು ತನಿಖೆ ಕೈಗೊಂಡಾಗ ಅಸಲಿಗೆ ಸೆಕ್ಯೂರ್ ವ್ಯಾಲ್ಯೂ ಕಂಪೆನಿಯ ಸಿಬ್ಬಂದಿಯೇ 16.50 ಲಕ್ಷ ರೂ. ಹಣವನ್ನು ಎಟಿಎಂಗೆ ತುಂಬಿಸಿರಲಿಲ್ಲ. ಆನಂತರ ನಡೆದಿದ್ದ ಕಳ್ಳತನದ ಕೃತ್ಯದ ಲಾಭ ಪಡೆದುಕೊಂಡಿದ್ದ ಎಟಿಎಂ ನಿರ್ವಹಣಾ ಕಂಪೆನಿ ಸಿಬ್ಬಂದಿ, ಒಟ್ಟು 16.56 ಲಕ್ಷ ರೂ. ಕಳ್ಳತನವಾಗಿದೆ ಎಂದು ಸುಳ್ಳು ದೂರು ನೀಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಸುಳ್ಳು ಪ್ರಕರಣ ದಾಖಲಿಸಿದ್ದ ಎಟಿಎಂ ನಿರ್ವಹಣಾ ಕಂಪೆನಿಯ ಪ್ರತಿನಿಧಿ ವಿರುದ್ಧವೇ ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಐವರನ್ನು ಬಂಧಿಸಲಾಗಿದೆ. ಮೂಲ ಪ್ರಕರಣದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.