ಬೆಂಗಳೂರು| ದ್ವಿಚಕ್ರ ವಾಹನ ವಿಚಾರಕ್ಕೆ ಜಗಳ: ಪುತ್ರನನ್ನೇ ಕೊಲೆಗೈದ ತಂದೆ
ಬೆಂಗಳೂರು: ಹೊರಗೆ ತೆಗೆದುಕೊಂಡು ಹೋಗಿದ್ದ ದ್ವಿಚಕ್ರ ವಾಹನವನ್ನು ವಾಪಸ್ ತರದಿದ್ದಕ್ಕೆ ತಂದೆ-ಮಗನ ಮಧ್ಯೆ ಜಗಳ ನಡೆದು ಮಗನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಲ್ಲಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ವರದಿಯಾಗಿದೆ.
ಡಿ ಗ್ರೂಪ್ ಲೇಔಟ್‍ನ ಮುದ್ದಿನಪಾಳ್ಯ ನಿವಾಸಿ ಅಂಜನ್‍ಕುಮಾರ್(27) ಎಂಬಾತ ತಂದೆಯಿಂದಲೇ ಕೊಲೆಯಾದ ಯುವಕ.
ಈತ ಪಿಯುಸಿ ವ್ಯಾಸಂಗ ಮಾಡಿದ್ದು, ಅರ್ಧಕ್ಕೇ ವಿದ್ಯಾಭ್ಯಾಸ ಮೊಟಕುಗೊಳಿಸಿ ಮನೆಯಲ್ಲೇ ಇರುತ್ತಿದ್ದ ಎನ್ನಲಾಗಿದೆ. ಆತನ ತಂದೆ ವೆಂಕಟೇಶ್ ಎಂಬುವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ.
ಜೂ.9ರ ರವಿವಾರ ಸಂಜೆ ಸ್ನೇಹಿತರನ್ನು ನೋಡಲು ವೆಂಕಟೇಶ್ ಅವರು ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದಾಗ ಕೀ ಕಳೆದು ಹೋಗಿದೆ. ಹಾಗಾಗಿ ದ್ವಿಚಕ್ರ ವಾಹನವನ್ನು ಅಲ್ಲಿಯೇ ಬಿಟ್ಟು ಮನೆಗೆ ಹಿಂದಿರುಗಿದ್ದಾರೆ.
ಇನ್ನು ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ದ್ವಿಚಕ್ರ ವಾಹನ ಇಲ್ಲದಿರುವುದನ್ನು ಗಮನಿಸಿದ ಅಂಜನ್‍ಕುಮಾರ್, ತನ್ನ ತಂದೆಯನ್ನು ಪ್ರಶ್ನಿಸಿದ್ದಾನೆ. ಕೀ ಕಳೆದಿದ್ದರಿಂದ ಅಲ್ಲೇ ಬಿಟ್ಟಿದ್ದೇನೆಂದು ಹೇಳಿದಾಗ ಕೋಪಗೊಂಡ ಅಂಜನ್‍ಕುಮಾರ್ ತಂದೆ ಜತೆ ಜಗಳವಾಡಿ ಹೆಲ್ಮೆಟ್‍ನಿಂದ ಹೊಡೆದಿದ್ದಾನೆ. ಮಗ ತನ್ನ ಮೇಲೆಯೇ ಕೈ ಮಾಡಿದನೆಂದು ಆಕ್ರೋಶಗೊಂಡ ತಂದೆ ಅಡುಗೆ ಮನೆಯಿಂದ ಚಾಕು ತಂದು ಮಗನ ಎದೆಗೆ ಚುಚ್ಚಿದಾಗ ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ಮಗನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.