ಬಿಎಂಟಿಸಿ ಅಧಿಕಾರಿಗಳ ಹೆಸರಿನಲ್ಲಿ 16 ಕೋಟಿ ರೂ. ವಂಚನೆ: ಓರ್ವನ ಬಂಧನ, 7 ಮಂದಿ ವಿರುದ್ಧ FIR
ಬೆಂಗಳೂರು: ಬಿಎಂಟಿಸಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಮಾಡಿ 16 ಕೋಟಿ ರೂ. ವಂಚಿಸಿದ್ದ ಆರೋಪದಡಿ ಶಾಂತಿನಗರದ ಬಿಎಂಟಿಸಿ ಆಡಳಿತ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಬಿಎಂಟಿಸಿಯ ಅಂದಿನ ಸಂಚಾರ ಮುಖ್ಯ ವ್ಯವಸ್ಥಾಪಕರಾಗಿದ್ದ ಶ್ರೀರಾಮ್ ಮುಲ್ಕವಾನ್ ಎಂಬವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ವಿಭಾಗೀಯ ಸಂಚಾರ ಅಧಿಕಾರಿ ಶ್ಯಾಮಲಾ. ಎಸ್. ಮದ್ದೋಡಿ, ಸಹಾಯಕ ಸಂಚಾರ ವ್ಯವಸ್ಥಾಪಕಿ ಮಮತಾ ಬಿ.ಕೆ, ಸಹಾಯಕ ಸಂಚಾರ ಅಧೀಕ್ಷಕರಾದ ಅನಿತಾ.ಟಿ, ಗುಣಶೀಲ, ಕಿರಿಯ
ಸಹಾಯಕರಾದ ವೆಂಕಟೇಶ್.ಆರ್, ಪ್ರಕಾಶ್ ಕೊಪ್ಪಳ ಇವರೆಲ್ಲರೂ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟಿ.ಎಚ್ ತಿಳಿಸಿದ್ದಾರೆ.
2020ರಿಂದ 2023ರ ವರೆಗೆ ನಡೆದ ಅವ್ಯವಹಾರ ಇದಾಗಿದೆ. ಬಿಎಂಟಿಸಿ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಳು ಮಂದಿ ಅಧಿಕಾರಿಗಳು ಬಿಎಂಟಿಸಿ ಭದ್ರತೆ ಹಾಗೂ ಜಾಗೃತದಳ ನಿರ್ದೇಶಕ ಅರುಣ್ ಹಾಗೂ ಎಂ.ಡಿ.ಯಾಗಿದ್ದ ಶಿಖಾ ಅವರ ಹೆಸರಿನಲ್ಲಿ ಸಹಿ ಇರುವ ಕಡತವನ್ನು ಕಲರ್ ಜೆರಾಕ್ಸ್ ಮಾಡಿ ಅದರಲ್ಲಿ ನಕಲಿ ಸಹಿ ಹಾಕಿ ಸುಮಾರು 16 ಕೋಟಿ ರೂ.ವರೆಗೂ ವಂಚಿಸಿರುವುದಾಗಿ ಆಪಾದಿಸಿ ಬಿಎಂಟಿಸಿಯ ವಿಚಕ್ಷಣಾ ದಳದ ಅಧಿಕಾರಿಗಳು ದೂರು ನೀಡಿದ್ದರು. ಈ ಸಂಬಂಧ 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶೇಖರ್ ಟಿ.ಎಚ್ ಮಾಹಿತಿ ನೀಡಿದ್ದಾರೆ.
ಕೊರೋನ ಲಾಕ್‍ಡೌನ್ ವೇಳೆ ವಿನಾಯಿತಿ ನೀಡುವ ಸಂಬಂಧ ಪರವಾನಗಿ ಶುಲ್ಕ ಮನ್ನಾ ಮಾಡಬಹುದು ಎಂದು ಹೇಳಿ ಪತ್ರ ಬರೆದು ನಕಲಿ ಸಹಿ ಮಾಡಿ 21 ಲಕ್ಷ ರೂ. ವಂಚಿಸಿದ್ದರು. ಅಲ್ಲದೆ, ಬಿಎಂಟಿಸಿ ಹಿರಿಯ ಅಧಿಕಾರಿಗಳು ಕಡತಗಳಿಗೆ ಅನುಮೋದಿಸಿದ ಸಹಿಗಳನ್ನು ಕಲರ್ ಜೆರಾಕ್ಸ್ ಮಾಡಿ ಸಂಸ್ಥೆಗೆ 16 ಕೋಟಿ ರೂ.ವರೆಗೂ ವಂಚಿಸಿದ್ದರು. ಅವ್ಯವಹಾರ ಎಸಗಿರುವುದು ಗೊತ್ತಾಗುತ್ತಿದ್ದಂತೆ ಬಿಎಂಟಿಸಿ ಅಧಿಕಾರಿಗಳು ದೂರು ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ವಂಚನೆ ಪ್ರಕರಣದ ಉಳಿದ ಆರು ಮಂದಿ ಆರೋಪಿಗಳು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದು, ತೀವ್ರ ತನಿಖೆ ಕೈಗೊಂಡು ಶೋಧ ನಡೆಸಲಾಗುತ್ತಿದೆ ಎಂದು ಡಿಸಿಪಿ ಶೇಖರ್ ಟಿ.ಎಚ್ ಹೇಳಿದ್ದಾರೆ.