ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಮಾಜಿ ಸಂಸದ ಮುದ್ದಹನುಮೇಗೌಡ

Update: 2024-02-22 16:47 GMT

ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಮುದ್ದಹನುಮೇಗೌಡ ಬಿಜೆಪಿ ತೊರೆದು ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿಯ ಇಂದಿರಾ ಭವನದ ಭಾರತ್ ಜೋಡೋ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್ ಪಕ್ಷದ ಬಾವುಟ ಹಾಗೂ ಶಾಲು ಹಾಕಿ ಪಕ್ಷಕ್ಕೆ ಬರ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮುದ್ದಹನುಮೇಗೌಡರು ಇಂದು ಯಾವುದೇ ಷರತ್ತು ಹಾಕದೇ ಪಕ್ಷಕ್ಕೆ ಸೇರಿದ್ದಾರೆ. ನಾವು ಯಾರಿಗೆ ಟಿಕೆಟ್ ನೀಡುತ್ತೇವೋ ಅವರ ಪರವಾಗಿ ಕೆಲಸ ಮಾಡಬೇಕು. ಇದು ಕಾಂಗ್ರೆಸ್ ಪಕ್ಷದ ಶಿಸ್ತು. ಮುದ್ದಹನುಮೇಗೌಡರ ಪಕ್ಷ ಸೇರ್ಪಡೆ ವಿಚಾರವಾಗಿ ರಾಜಣ್ಣ, ವಾಸು ಸೇರಿದಂತೆ ಜಿಲ್ಲೆಯ ಎಲ್ಲ ನಾಯಕರು ನಮ್ಮ ಜತೆ ಚರ್ಚೆ ಮಾಡಿ ಈ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.

ಕಳೆದ 45 ವರ್ಷಗಳಿಂದ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರಲಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ನಮ್ಮ ವಿರುದ್ಧ ಅಭ್ಯರ್ಥಿ ಹಾಕಿದ್ದರೂ ನಮ್ಮ ಅಭ್ಯರ್ಥಿ ಒಂದೂವರೆ ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ಚುನಾವಣೆ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದಿದ್ದರು ಎಂದು ಶಿವಕುಮಾರ್ ಹೇಳಿದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಕೇವಲ ಈ ಐದು ವರ್ಷ ಮಾತ್ರವಲ್ಲ. ಮುಂದಿನ ಐದು ವರ್ಷಕ್ಕೂ ನಿಮ್ಮದೇ ಸರಕಾರ ಅಧಿಕಾರದಲ್ಲಿರಲಿದೆ. ರಾಜಕಾರಣ ಹೇಗೆ ಮಾಡಬೇಕು ಎಂದು ಗೊತ್ತಿದೆ. ನೀವು ಲೋಕಸಭೆ ಚುನಾವಣೆ ಬಗ್ಗೆ ಗಮನಹರಿಸಿ. ನಮ್ಮ ಸರಕಾರದ ಗ್ಯಾರಂಟಿ ಯೋಜನೆ ಪ್ರತಿ ಕುಟುಂಬ ತಿಂಗಳಿಗೆ 5 ಸಾವಿರದಷ್ಟು ಉಳಿತಾಯ ಮಾಡಲು ನೆರವಾಗುತ್ತಿದೆ ಎಂದು ಶಿವಕುಮಾರ್ ಹೇಳಿದರು.

ಬಿಜೆಪಿಯವರು ಜನರ ಭಾವನೆ ಬಗ್ಗೆ ರಾಜಕಾರಣ ಮಾಡಿದರೆ ನಾವು ಜನರ ಬದುಕಿನ ಬಗ್ಗೆ ಆಲೋಚಿಸಿ ಅವರ ಕಷ್ಟಕ್ಕೆ ಸ್ಪಂದಿಸುವ ಕಾರ್ಯಕ್ರಮ ನೀಡಿದ್ದೇವೆ. ನೀವೆಲ್ಲರೂ ಪ್ರತಿ ಬೂತ್ ನಲ್ಲಿ ಜನರನ್ನು ಸಂಪಾದಿಸಬೇಕು. ದಳ ಹಾಗೂ ಬಿಜೆಪಿಯವರಿಗೆ ಮನವರಿಕೆ ಮಾಡಿಕೊಡಿ. ಮುದ್ದಹನುಮೇಗೌಡರೆ ತಮ್ಮ ಬಳಿ ಹೆಚ್ಚು ಕ್ರಿಯಾಶೀಲ ರಾಜಕಾರಣ ಉಳಿದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಬೇರೆ ಪಕ್ಷದ ನಾಯಕರನ್ನು ಕಾಂಗ್ರೆಸ್ ಪಕ್ಷದತ್ತ ಕರೆಯಿರಿ ಎಂದು ಅವರು ಆಹ್ವಾನ ನೀಡಿದರು.

ನಮ್ಮ ಪಕ್ಷಕ್ಕೆ ಮಾಜಿ ಶಾಸಕ ಗೌರಿಶಂಕರ್ ಅವರನ್ನು ಸೇರಿಸಿಕೊಂಡಿದ್ದೇವೆ. ತುಮಕೂರು ಜಿಲ್ಲೆಯಲ್ಲಿ ಅನೇಕರು ನಮ್ಮ ಪಕ್ಷ ಸೇರಲು ಉತ್ಸುಕರಾಗಿದ್ದಾರೆ. ನೀವೆಲ್ಲರೂ ಸೇರಿ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಶಿವಕುಮಾರ್ ಕರೆ ನೀಡಿದರು.

ಈ ವೇಳೆ ಸಚಿವರಾದ ಡಾ.ಜಿ.ಪರಮೇಶ್ವರ್, ಕ್ಯಾತಸಂದ್ರ ಎನ್.ರಾಜಣ್ಣ, ಶಾಸಕರಾದ ಶ್ರೀನಿವಾಸ್, ಡಾ.ರಂಗನಾಥ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಎನ್.ಚಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News