ಬೆಂಗಳೂರು| ನಕಲಿ ದಾಖಲಾತಿ ಸೃಷ್ಟಿಸಿ ವೃದ್ಧೆಗೆ ವಂಚನೆ: ಐವರ ಬಂಧನ

Update: 2023-12-22 15:36 GMT

ಬೆಂಗಳೂರು: ಅಸಹಾಯಕ ವೃದ್ಧೆಗೆ ಸಂಬಂಧಿಸಿದ ಆಸ್ತಿಗಳ ನಕಲಿ ದಾಖಲಾತಿ ಸೃಷ್ಟಿಸಿ ಹಾಗೂ ನಕಲಿ ಬ್ಯಾಂಕ್ ಖಾತೆ ತೆರೆದು 3 ಬ್ಯಾಂಕ್‍ಗಳಿಂದ 3 ಕೋಟಿ ರೂ.ಗೂ ಅಧಿಕ ಸಾಲ ಪಡೆದು ವಂಚಿಸಿದ್ದ ಐವರನ್ನು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಭಾಸ್ಕರ್, ಮಹೇಶ, ಅಭಿಷೇಕ್ ಗೌಡ, ಡಿ.ಆರ್.ಅರುಣ್, ಟಿ.ಪಿ.ಶಿವಕುಮಾರ್ ಎಂಬುವರನ್ನು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಜೆ.ಪಿ.ನಗರದ ನಿವಾಸಿ ಅಂಬುಜಾಕ್ಷಿ(75) ವಂಚನೆಗೊಳಗಾದವರು.

ಅಂಬುಜಾಕ್ಷಿ ಅವರು ಜೆ.ಪಿ.ನಗರದಲ್ಲಿ 1,350 ಅಡಿ ವಿಸ್ತೀರ್ಣದ ಬಿಡಿಎ ನಿವೇಶನದಲ್ಲಿ ಎರಡು ಅಂತಸ್ತಿನ ಸ್ವಂತ ಡೂಪ್ಲೆಕ್ಸ್ ಮನೆ ಹೊಂದಿದ್ದಾರೆ. ಮಕ್ಕಳು ವಿದೇಶದಲ್ಲಿದ್ದು, ಇವರೂ ಸಹ ವಿದೇಶಕ್ಕೆ ಹೋಗಿ ನೆಲೆಸಲು ಚಿಂತಿಸಿದ್ದರು. ಹೀಗಾಗಿ ತಮ್ಮ ಮನೆ ಮಾರಾಟ ಮಾಡುವ ವಿಚಾರವನ್ನು ರಿಯಲ್ ಎಸ್ಟೇಟ್ ಬ್ರೋಕರ್ ಗಳಾಗಿದ್ದ ಆರೋಪಿಗಳಿಗೆ ತಿಳಿಸಿದ್ದರು.

ಇದೇ ನೆಪದಲ್ಲಿ ನಿವೇಶನದ ದಾಖಲೆಗಳನ್ನು ಪಡೆದುಕೊಂಡ ಆರೋಪಿಗಳು, ಅಸಲಿ ದಾಖಲೆಗಳ ರೀತಿಯಲ್ಲೇ ನಿವೇಶನದ 3 ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಂಬುಜಾಕ್ಷಿಯವರ ಸಹಿ ಹೋಲುವ ಫೋರ್ಜರಿ ಸಹಿಗಳನ್ನು ಮಾಡಿದ್ದರು. ನಂತರ ಈ ದಾಖಲೆಗಳನ್ನು 3 ಬ್ಯಾಂಕ್‍ಗಳಿಗೆ ನೀಡಿ, 3 ಕೋಟಿ ರೂ.ಗೂ ಅಧಿಕ ಸಾಲ ಪಡೆದುಕೊಂಡು ಪರಾರಿಯಾಗಿದ್ದರು. ಸಾಲದ ವಿಚಾರವಾಗಿ ಬ್ಯಾಂಕ್ ಸಿಬ್ಬಂದಿ ಅಂಬುಜಾಕ್ಷಿ ಅವರನ್ನು ಸಂಪರ್ಕಿಸಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ. ಡಿ.14ರಂದು ಮಹಿಳೆಯು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಮುಂದಿನ ತನಿಖೆಯ ಜವಾಬ್ದಾರಿಯನ್ನು ಸಿಸಿಬಿಗೆ ವರ್ಗಾಯಿಸಿತ್ತು. ಆರೋಪಿಗಳು ಸಾಲ ಪಡೆದಿದ್ದ ಬ್ಯಾಂಕ್‍ಗಳಿಂದ ಮಾಹಿತಿ, ಸಾಕ್ಷ್ಯ ಸಂಗ್ರಹಿಸಿದ ಸಿಸಿಬಿ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದು, ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿರುವುದಾಗಿ ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News