‘ಲಂಕೇಶ್ ಮೇಷ್ಟ್ರು’ ಹೇಳಿದ್ದ ಮಾತನ್ನು ಧಾರಾವಾಹಿಗಳಲ್ಲಿ ಅನುಸರಿಸುತ್ತಿದ್ದೇನೆ : ಟಿ.ಎನ್.ಸೀತಾರಾಂ

Update: 2024-11-13 15:40 GMT

ಬೆಂಗಳೂರು : ಸಿನಿಮಾ, ನಾಟಕ ಏನೇ ಇರಲಿ ಅಸಹಾಯಕರ ಪರವಾಗಿ ಹೋರಾಟ ಮಾಡಬೇಕು ಎಂದು ಲಂಕೇಶ್ ಮೇಷ್ಟ್ರು ನನಗೆ ಹೇಳಿದ್ದ ಮಾತನ್ನು ಇವತ್ತಿಗೂ ನನ್ನ ಧಾರಾವಾಹಿಗಳಲ್ಲಿ ಅನುಸರಿಸುತ್ತಿದ್ದೇನೆ ಎಂದು ಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಂ ಹೇಳಿದ್ದಾರೆ.

ಬುಧವಾರ ಇಲ್ಲಿನ ಕಲಾಗ್ರಾಮದಲ್ಲಿ ಆಯೋಜಿಸಿದ್ದ ಕರ್ನಾಟಕ ಸಾಹಿತ್ಯಾ ಅಕಾಡೆಮಿಯು ಆಯೋಜಿಸಿದ್ದ ‘ಲಂಕೇಶ್ ಬಹುತ್ವಗಳ ಶೋಧ: ಅಧ್ಯಯನ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಲಂಕೇಶ್ ಮೇಷ್ಟ್ರು ಅಂದರೆ ಒಂದು ಲೋಕ. ಆ ಸಮುದ್ರದಲ್ಲಿ ಮುಳುಗಿದ ಶಿಬಿರಾರ್ಥಿಗಳು ಅದೃಷ್ಟಶಾಲಿಗಳು. ನಾಟಕದ ಮೂಲಕವೇ ನಾನು ಅವರಿಗೆ ಪರಿಚಿತನಾದದ್ದು, ಅವರ ನಾಟಕದ ಗದ್ಯವೇ ಕಾವ್ಯಾತ್ಮಕ ಶೈಲಿಯಲ್ಲಿದೆ. ಇಡೀ ಕನ್ನಡ ರಂಗಭೂಮಿಯನ್ನು ಬಹಳ ಕಾಡಿಸಿದ ನಾಟಕ ಅವರದ್ದು ಎಂದರು.

ಹೆಣ್ಣು ಶ್ರೀಮಂತೆಯಿರಲಿ, ಬಡವಳಿರಲಿ ಸ್ವತಂತ್ರ ಜೀವನ ಇಲ್ಲದೆ ಅವಳನ್ನು ಬಂಧಿಯಾಗಿಸಿದೆ ಈ ಸಮಾಜ. ಹೆಣ್ಣಿನ ಗೋಡೆಗಳನ್ನು ಒಡೆಯುವ ಕೆಲಸ ಮಾಡಬೇಕಿದೆ ಎಂದು ಲಂಕೇಶರು ಯಾವಾಗಲೂ ಹೇಳುತ್ತಿದ್ದರು. ತಮ್ಮ ಒಂದು ಮನೆಯನ್ನು ಮಾರಾಟ ಮಾಡಿ, ಪಲ್ಲವಿ ಸಿನಿಮಾ ತೆಗೆದರು. ಹೇಳಬೇಕಾದ್ದನ್ನು ಹೆಚ್ಚು ಜನರಿಗೆ ತಲುಪಿಸಲು ಸಿನಿಮಾ ಮಾಧ್ಯಮವಾಗುತ್ತದೆ ಎಂದು ನಂಬಿದ್ದರು ಎಂದು ಟಿ.ಎನ್. ಸೀತಾರಾಂ ತಿಳಿಸಿದರು.

ಲೇಖಕಿ ಬಾನು ಮುಷ್ತಾಕ್ ಮಾತನಾಡಿ, ಲಂಕೇಶ್ ಚಲನಚಿತ್ರ, ಪತ್ರಿಕೆ, ನಾಟಕ, ಕತೆ, ಕಾದಂಬರಿಗಳಲ್ಲಿ ಸಾಮಾಜಿಕ ಜನಜೀವನ ಚಿಂತನಾಕ್ರಮವನ್ನು ಕ್ರೂಢೀಕರಿಸುತ್ತಾ ಹೋದರು. ಅಲ್ಲಿ ಸಮಸ್ಯೆಯ ಕುರಿತ ವಿವಿಧ ಆಯಾಮಗಳಿರುತ್ತಿದ್ದವು. ಸ್ವಪ್ರಶಂಸೆ ಎಂದಿಗೂ ಒಪ್ಪಿಕೊಳ್ಳುತ್ತಿರಲಿಲ್ಲ. ಪತ್ರಿಕೆಯ ಭಾಷೆಯನ್ನು ಗ್ರಾಂಥಿಕದಿಂದ ಜನಸಾಮಾನ್ಯರ ಆಡುಭಾಷೆಗೆ ಬದಲಿಸಿದರು. ಕರ್ನಾಟಕದ ರಾಜಕೀಯವನ್ನು ನಿರ್ದೇಶಿಸುವ ಮಟ್ಟಕ್ಕೆ ಪತ್ರಿಕೆ ಬೆಳೆದಿತ್ತು. ಲಂಕೇಶರನ್ನು ನಾವು ಸಮಗ್ರವಾಗಿ ನೋಡಲಾಗದು. ನಮ್ಮ ನಮ್ಮ ಅರಿವಿಗೆ ನಿಲುಕಿದಷ್ಟು ಪಾಶ್ರ್ವ ನೋಟವಷ್ಟೇ ಸಾಧ್ಯ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ಆ ಕಾಲದ ನಮ್ಮಂತಹ ತರುಣ ಬರೆಹಗಾರರಿಗೆ ನೈತಿಕ ಸ್ಥೈರ್ಯವಾಗಿ ಲಂಕೇಶ್ ನಿಂತಿದ್ದರು. ನಾವು ಧೈರ್ಯವಾಗಿ ಬರೆಯುತ್ತಿದ್ದೆವು. ಆದರೆ ಇಂದು ಭಯದ ವಾತಾವರಣವೊಂದು ನಿರ್ಮಾಣವಾಗಿದೆ. ಮುಕ್ತವಾಗಿ ಬರೆಯಲು ಸಾಧ್ಯವಿಲ್ಲ. ಈ ಕಾಲದ ಲೇಖಕರಾದ ನಾವು ಇಂದಿನ ತರುಣರಿಗೆ ಆ ವಿಶ್ವಾಸ ಸೃಷ್ಟಿಸುವಲ್ಲಿ ಸೋತಿದ್ದೇವೆ. ಲಂಕೇಶರಲ್ಲಿ ಎಲ್ಲರನ್ನೂ ಆರಿತುಕೊಳ್ಳುವ ಶಕ್ತಿಯಿದ್ದಂತೆ, ಕೆಟ್ಟದ್ದನ್ನು ಇರಿಯುವ ಶಕ್ತಿಯೂ ಇತ್ತು. ಈ ಶಿಬಿರ ಲಂಕೇಶರನ್ನು ಮತ್ತೆ ಜೀವಂತಗೊಳಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕಿ ಡಾ.ಎಂ.ಎಸ್. ಆಶಾದೇವಿ, ಇಂದಿರಾ ಲಂಕೇಶ್, ವಿಜಯ್ ಹನಕೆರೆ, ರಿಜಿಸ್ಟ್ರಾರ್ ಎನ್.ಕರಿಯಪ್ಪ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News