ಸರಕಾರಿ ಅಭಿಯೋಜಕರ ಹುದ್ದೆಯ ನೇಮಕಾತಿ ಅಕ್ರಮ ; ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

Update: 2024-02-23 14:52 GMT

ಬೆಂಗಳೂರು: 2013-14ನೇ ಸಾಲಿನಲ್ಲಿ ನಡೆದಿದ್ದ 180 ಸಹಾಯಕ ಸರಕಾರಿ ಅಭಿಯೋಜಕರ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಎಸಗಿದ ಪ್ರಕರಣ ಸಂಬಂಧ 36 ಆರೋಪಿಗಳ ವಿರುದ್ಧ ಪ್ರಕರಣ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದೆ.

36 ಮಂದಿ ಅಭಿಯೋಜಕರು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

ಈ ಕುರಿತಂತೆ ಕಲಬುರಗಿಯ ಚಾಯದೇವಿ ಸೇರಿದಂತೆ ವಿವಿಧ ಜಿಲ್ಲೆಗಳ ಕೋರ್ಟ್‌ಗಳಲ್ಲಿ ಸರಕಾರಿ ಅಭಿಯೋಜಕರಾಗಿ ನೇಮಕಗೊಂಡು ಸದ್ಯ ಅಮಾನತ್ತಿನಲ್ಲಿರುವ 36 ಎಪಿಪಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಆರ್‌. ನಟರಾಜ್‌ ಅವರ ನ್ಯಾಯಪೀಠ ಪ್ರಕಟಿಸಿದೆ.

ಇದರಿಂದ 36 ಆರೋಪಿಗಳ ಮೇಲೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆಗೆ ಹಸಿರು ನಿಶಾನೆ ದೊರೆತಂತಾಗಿದೆ. ಲೋಕಾಯುಕ್ತ ಕೋರ್ಟ್‌ ಪ್ರಕರಣ ಸಂಬಂಧ ತಮ್ಮ ವಿರುದ್ಧದ ಆರೋಪಗಳಿಗೆ ಪೂರಕ ಸಾಕ್ಷ್ಯಗಳಿಲ್ಲ. ಆದ್ದರಿಂದ ತಮ್ಮ ವಿರುದ್ಧದ ಪ್ರಕರಣದ ವಿಚಾರಣೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದರು.

ಆದರೆ ಲೋಕಾಯುಕ್ತ ಪರ ವಿಶೇಷ ಅಭಿಯೋಜಕ ಬಿ.ಎಸ್‌. ಪ್ರಸಾದ್‌, ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ. ಅರ್ಜಿದಾರರ ಉತ್ತರ ಪತ್ರಿಕೆ ಹಾಗೂ ಅಂಕಗಳನ್ನು ತಿದ್ದಲಾಗಿದೆ. ಇದರ ಪರಿಣಾಮ ಅವರು ಎಪಿಪಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರಿಯಬೇಕಿದೆ. ಅರ್ಜಿದಾರರು ಅಕ್ರಮ ಎಸಗಿದ್ದಾರೆಯೋ ಅಥವಾ ಇಲ್ಲವೋ ಎಂಬುದು ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿಯೇ ತೀರ್ಮಾನವಾಗಬೇಕಿದೆ. ಹಾಗಾಗಿ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬಾರದು ಎಂದು ಕೋರ್ಟ್ ಗೆ ಮನವಿ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News