ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ನರಮೇಧ ಅಂತರ್ ರಾಷ್ಟ್ರೀಯ ಅಪರಾಧ: ಖ್ಯಾತ ವಕೀಲ ಬಿ.ಟಿ.ವೆಂಕಟೇಶ್
ಬೆಂಗಳೂರು, ನ.2: ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ನರಮೇಧ ಒಂದು ರೀತಿಯ ಅಂತಾರಾಷ್ಟ್ರೀಯ ಅಪರಾಧವಾಗಿದೆ. ಸಿರಿಯಾ, ಕಾಂಬೋಡಿಯಗಳಲ್ಲಿ ನಡೆದ ಹತ್ಯೆಗಳಿಗೂ, ಈಗಿನ ಇಸ್ರೇಲ್ ನರಮೇಧಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಖ್ಯಾತ ವಕೀಲ ಬಿ.ಟಿ.ವೆಂಕಟೇಶ್ ಖಂಡಿಸಿದ್ದಾರೆ.
ಗುರುವಾರ ನಗರದ ಕ್ವೀನ್ ರಸ್ತೆಯ ಬಿಐಎಫ್‍ಟಿ ಸಭಾಂಗಣದಲ್ಲಿ ಸಾಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕ ಸಂಘಟನೆಯ ವತಿಯಿಂದ ನಡೆದ ‘ಫೆಲೆಸ್ತೀನ್ ಸಮಸ್ಯೆ-ಒಂದು ಅವಲೋಕನ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ʻಇಸ್ರೇಲ್ ಜನಾಂಗೀಯ ದ್ವೇಷವನ್ನು ಮೆರೆಯುತ್ತಿದೆ. ಇಂತಹ ಮನಸ್ಥಿತಿಯನ್ನು ಇಡೀ ಜಗತ್ತು ಖಂಡಿಸಬೇಕುʻ ಎಂದರು.
ಚಿಂತಕ ಶಿವಸುಂದರ್ ಮಾತನಾಡಿ, ಇಸ್ರೇಲ್‍ನ ನಿರಾಯುಧ ನಾಗರಿಕರ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ನೆಪವಾಗಿಸಿಕೊಂಡು ಇಸ್ರೇಸ್, ಫೆಲೆಸ್ತೀನ್‍ನ ಅಸಹಾಯಕ, ಅಮಾಯಕ ನಾಗರಿಕರ ಮೇಲೆ ದಾಳಿ ನಡೆಸಿ ನರಮೇಧ ಮಾಡುತ್ತಿದೆ. ಇದಕ್ಕೆ ಅಮೇರಿಕ ಹಾಗೂ ಯೂರೋಪಿನ ಬಲಿಷ್ಠ ರಾಷ್ಟ್ರಗಳು ತಮ್ಮ ಸ್ವಾರ್ಥ ಜಿಯೊ-ಪೊಲಿಟಿಕಲ್ ಆಸಕ್ತಿಗಳಿಗಾಗಿ ಸಂಪೂರ್ಣ ಬೆಂಬಲ ನೀಡಿವೆ. ಒಂದೂವರೆ ದಶಕಗಳಿಂದ ಗಾಜಾ ಪಟ್ಟಿಯಲ್ಲಿ ಅನ್ನಾಹಾರಗಳಿಲ್ಲದೆ ನಲುಗಿಹೋಗಿದ್ದ 23 ಲಕ್ಷ ಫೆಲೆಸ್ತೀನಿಯರ ಮೇಲೆ ಇಸ್ರೇಲ್ ಭೂದಾಳಿಯ ಮೂಲಕ ನರಮೇಧ ಪ್ರಾರಂಭಿಸಿದೆ. ಆ ಮೂಲಕ ಅಳಿದುಳಿದ ಫೆಲೆಸ್ತೀನ್‍ನನ್ನು ಧ್ವಂಸಗೊಳಿಸಿ ಸಂಪೂರ್ಣ ಇಸ್ರೇಲೀಕರಣ ಮಾಡಿಕೊಳ್ಳುವ ಐತಿಹಾಸಿಕ ಷಡ್ಯಂತ್ರವನ್ನು ಮುಂದುವರೆಸಿದೆ ಎಂದರು.
ಇಸ್ರೇಲ್ ನಡೆಸುತ್ತಿರುವ ಯುದ್ಧದ ನಿಜವಾದ ಉದ್ದೇಶ ಹಮಾಸ್ ದಾಳಿಯನ್ನು ಬಳಸಿಕೊಂಡು ಫೆಲೆಸ್ತೀನ್ ರೈತಾಪಿಗಳ ಹಾಗೂ ಗಾಝಾ ವಾಸಿಗಳ ನರಮೇಧ ನಡೆಸಿ ಫೆಲೆಸ್ತೀನ್ ಕಬಳಿಸುವುದೇ ಆಗಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಅವರು ವಿವರಿಸಿದರು.
ವಿಚಾರ ಸಂಕಿರಣದಲ್ಲಿ ಸಾಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಲಬೀದ್‍ಶಾಫಿ, ಜೆಐಎಚ್ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ ಉಪಸ್ಥಿತರಿದ್ದರು.