ಡಿಕೆಶಿ ಬಗ್ಗೆ ಮಾತನಾಡುವುದಕ್ಕಿಂತ ಮೌನವಾಗಿರುವುದೇ ಒಳ್ಳೆಯದು : ಕುಮಾರಸ್ವಾಮಿ

ಕುಮಾರಸ್ವಾಮಿ
ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹುಶಃ ಭೂಮಿ ಮೇಲಿಲ್ಲ, ಅಧಿಕಾರದ ಹಾಗೆ ಮಾತನಾಡಿಸುತ್ತಿದೆ. ಅವರ ಬಗ್ಗೆ ಮಾತನಾಡುವುದಕ್ಕಿಂತ ಮೌನವಾಗಿರುವುದೇ ಒಳ್ಳೆಯದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ್ಟು ಬೋಲ್ಟ್ ರಿಪೇರಿ ಮಾಡಲು ಬಹಳ ಜನ ಇದ್ದಾರೆ. ರಾಜ್ಯದ ಜನತೆ ಇವರಿಗೆ 135 ಸೀಟು ಕೊಟ್ಟಿರುವುದು ರಿಪೇರಿ ಮಾಡುವುದಕ್ಕಲ್ಲ, ರಾಜ್ಯದ ಜನರ ಸಮಸ್ಯೆ ಆಲಿಸಲಿಕ್ಕೆ ಎಂದು ಹೇಳಿದರು.
ರಾಜಕಾರಣಿಗಳ ಮಕ್ಕಳು ಚಲನಚಿತ್ರ ಕ್ಷೇತ್ರದಲ್ಲಿ ಪ್ಲ್ಯಾಪ್ ಆಗಿ ಈಗ ರಾಜಕಾರಣಕ್ಕೆ ಬಂದಿದ್ದಾರೆ ಎನ್ನುವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಜೀವನದಲ್ಲಿ ಅನೇಕ ಬಾರಿ ಸೋಲು, ಗೆಲುವು ಇರುತ್ತದೆ. ಕೆಲವು ಬಾರಿ ಬದಲಾವಣೆ ಆಗುತ್ತದೆ. ನಾನೇ ಒಂದು ಕಾಲದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಇದ್ದೆ. ಸಿನಿಮಾ ಹಂಚಿಕೆದಾರನಾಗಿದ್ದೆ, ಯಾವುದೇ ಸಂದರ್ಭದಲ್ಲಿಯೂ ರಾಜಕೀಯಕ್ಕೆ ಬರುತ್ತೇನೆ ಎಂದುಕೊಂಡಿರಲಿಲ್ಲ. ನಾನೇ ಅಚಾನಕ್ಕಾಗಿ ರಾಜಕೀಯಕ್ಕೆ ಬಂದೆ. ಏಳು ಬೀಳು ಎನ್ನುವುದು ಎಲ್ಲರಿಗೂ ಇರುತ್ತದೆ. ಅವರ ಹೇಳಿಕೆಗೆ ಅಷ್ಟೇನೂ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದು ತಿಳಿಸಿದರು.