ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಆಗ್ರಹಿಸಿ ಜು.1ರಂದು ರಾಜ್ಯಾದ್ಯಂತ ಕರವೇ ಹೋರಾಟ

Update: 2024-06-30 14:54 GMT

ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ

ಬೆಂಗಳೂರು : ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಕಡ್ಡಾಯ ಉದ್ಯೋಗ ಮೀಸಲಾತಿ ಕಲ್ಪಿಸಲು ಹಾಗೂ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ನಾಳೆ(ಜು.1) ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟಕ್ಕೆ ಕರೆ ನೀಡಲಾಗಿದೆ.

ಇತರೆ ರಾಜ್ಯಗಳಿಂದ ಉದ್ಯೋಗ ಅರಸಿ ಬೆಂಗಳೂರಿನತ್ತ ವಲಸೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಖಾಸಗಿ ವಲಯಗಳಲ್ಲಿ ಕನ್ನಡೇತರರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಲಾಗುತ್ತಿದೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಖಾಸಗಿ ವಲಯದಲ್ಲಿ ‘ಸಿ ಮತ್ತು ಡಿ’ ದರ್ಜೆಯ ಹುದೆಗಳಲ್ಲಿ ಶೇ.100ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡಬೇಕು. ಖಾಸಗಿ ಸಂಸ್ಥೆಗಳ ಇತರೆ ಹುದ್ದೆಯಲ್ಲಿ ಶೇ.80ರಷ್ಟು ಕನ್ನಡಿಗರಿಗೆ ಮೀಸಲಿಡಬೇಕು ಎಂದು ಕರವೇ ಆಗ್ರಹಿಸಿದೆ.

ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946ರ ಅನ್ವಯ ಬಲಿಷ್ಠ ಕಾನೂನು ರೂಪಿಸಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು. 15 ವರ್ಷ ರಾಜ್ಯದಲ್ಲಿದ್ದವರಿಗೆ ಕನ್ನಡಿಗರೆಂದು ಪರಿಗಣಿಸುವ ನಿಯಮವಿದ್ದು, ಅಂತವರಿಗೆ ಕನ್ನಡ ಪರೀಕ್ಷೆ ನಡೆಸಿ ಉತ್ತೀರ್ಣರಾದರೆ ಮಾತ್ರ ಕನ್ನಡಿಗರೆಂದು ಪರಿಗಣಿಸಬೇಕು ಎಂದು ಕರವೇ ಒತ್ತಾಯಿಸಿದೆ.

ನಿಯಮ ಪಾಲಿಸದ ಖಾಸಗಿ ಸಂಸ್ಥೆಗಳ ಪರವಾನಗಿ ರದ್ದು ಮಾಡಬೇಕು. ಸರಕಾರ ನೀಡಿರುವ ಭೂಮಿ, ಸವಲತ್ತುಗಳನ್ನು ವಾಪಾಸ್ ಪಡೆದು ಕ್ರಿಮಿನಲ್ ಮೊಕದ್ದಮೆ ಹಾಕಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಧರಣಿ ನಡೆಸುತ್ತಿರುವುದಾಗಿ ಕರವೇ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News