ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಬೇಕಿದ್ದ ದಿಲ್ಲಿ ರೈತ ಹೋರಾಟದ ಕುರಿತ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಡೆಯೊಡ್ಡಿದ್ದು, ಕಿಸಾನ್ ಸತ್ಯಾಗ್ರಹ ಸಿನಿಮಾ ಮಾತ್ರವಲ್ಲದೆ, ಉಕ್ರೇನ್ ಹಾಗೂ ಇಸ್ರೇಲ್‌ನ ಯುದ್ಧಕ್ಕೆ ಸಂಬಂಧಿಸಿದ ಆ ದೇಶಗಳದ್ದೇ ಆದ ಎರಡು ಸಿನಿಮಾಗಳ ಪ್ರದರ್ಶನಕ್ಕೂ ತಡೆ ನೀಡಲಾಗಿದೆ ಎಂದು ವರದಿಯಾಗಿದೆ.
ಈ ಮೂರು ಸಿನಿಮಾಗಳು ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿಲ್ಲ ಎಂಬ ಕಾರಣ ನೀಡಿ, ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಲಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ‘ಕಿಸಾನ್ ಸತ್ಯಾಗ್ರಹ’ ಸಿನಿಮಾದ ನಿರ್ದೇಶಕ ಕೇಸರಿ ಹರವೂ ಪ್ರತಿಕ್ರಿಯಿಸಿ, "ಚಲನಚಿತ್ರೋತ್ಸವದಲ್ಲಿ ಸೆನ್ಸಾರ್ ಮಂಡಳಿಯ ಪ್ರಮಾಣ ಪತ್ರ ಪಡೆಯದ ಸಿನಿಮಾಗಳನ್ನು ಪ್ರದರ್ಶನ ಮಾಡುವಂತಿಲ್ಲ ಎಂಬ ಯಾವುದೇ ನಿಯಮಗಳಿಲ್ಲ. ಪ್ರದರ್ಶನಗೊಳ್ಳುವ ಸಿನಿಮಾಗಳ ಪಟ್ಟಿಯಲ್ಲಿ ಕಿಸಾನ್ ಸತ್ಯಾಗ್ರಹ ಸಿನಿಮಾವನ್ನೂ ರಾಜ್ಯ ಸರಕಾರ ಒಳಗೊಂಡಿತ್ತು. ಆದರೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ನಮ್ಮ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ನೀಡಿದೆ. ಸರಕಾರದ ವಿರುದ್ಧ ಇರುವ ಕಾರಣಕ್ಕಾಗಿ ತಡೆ ನೀಡಿರಬಹುದು" ಎಂದು ಅವರು ಹೇಳಿದ್ದಾರೆ.