ಸಂವಿಧಾನ ಉಳಿಸಿಕೊಳ್ಳಲು ಎಲ್ಲಾ ದೇಶಪ್ರೇಮಿಗಳು ಸಿದ್ಧರಾಗಬೇಕು : ಕೆ.ಎಲ್.ಅಶೋಕ್
ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಜೂ.4ರಂದು ಬಿಡುಗಡೆಯಾಗಲಿದ್ದು, ಮತ ಎಣಿಕೆಯ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ʼಎದ್ದೇಳು ಕರ್ನಾಟಕʼ ಗವರ್ನಿಂಗ್ ಕೌನ್ಸಿಲ್ ಸದಸ್ಯ ಕೆ.ಎಲ್.ಅಶೋಕ್ ಆಗ್ರಹಿಸಿದ್ದಾರೆ.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ದೇಶದ ಪ್ರಜಾತಂತ್ರದ ಭವಿಷ್ಯ, ಸಂವಿಧಾನ ಮೌಲ್ಯಗಳ ಭವಿಷ್ಯ, ಜನ ಸಾಮಾನ್ಯರ ಬದುಕಿನ ಭವಿಷ್ಯ ಈ ಬಾರಿ ಸರಕಾರ ಯಾರು ರಚಿಸುತ್ತಾರೆ ಎಂಬುದರ ಮೇಲೆ ನಿಂತಿದೆ. ಬಿಜೆಪಿ ಕಳ್ಳ ಮಾರ್ಗಗಳ ಮೂಲಕ ಸರಕಾರ ರಚಿಸಲು ಪ್ರಯತ್ನಿಸುತ್ತದೆ. ಪ್ರಜ್ಞಾವಂತ ನಾಗರಿಕರಾದ ನಾವು ಯಾವುದೇ ಕಾರಣಕ್ಕೂ ಅಂತಹ ಕುತಂತ್ರಗಳಿಗೆ ಅವಕಾಶ ಮಾಡಿಕೊಡಬಾರದು ಮತ್ತು ಸಂವಿಧಾನ ಉಳಿಸಿಕೊಳ್ಳಲು ಎಲ್ಲ ದೇಶಪ್ರೇಮಿಗಳೂ ಸಿದ್ಧರಾಗಬೇಕು" ಎಂದು ಕರೆ ನೀಡಿದರು.
ಲೋಕಸಭಾ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಗೊಂಡಾಗಿನಿಂದಲೂ, ಶಾಸನಬದ್ಧ ಸಂಸ್ಥೆಯಾದ ಚುನಾವಣಾ ಆಯೋಗ ಮತ್ತು ಸಂಬಂಧಪಟ್ಟ ಅದರ ಅಂಗಗಳು ನಡೆದುಕೊಂಡ ಸಂವಿಧಾನಾತ್ಮಕವಲ್ಲದ ನಡವಳಿಕೆಗಳು, ಈಗ ನಡೆಯಲಿರುವ ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆಯ ಸಂದರ್ಭದಲ್ಲೂ ಮುಂದುವರೆಯಬಹುದಾದ ಸಾಧ್ಯತೆ ಇದೆ ಎಂದು ಅಶೋಕ್ ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ಎಷ್ಟು ಅಪರಾಧಗಳನ್ನು ಮಾಡಿದೆಯೆಂದರೆ, ಅದು ಅಷ್ಟು ಸುಲಭಕ್ಕೆ ಅಧಿಕಾರ ಬಿಟ್ಟು ಕೆಳಗಿಳಿಯುವುದಿಲ್ಲ. ತಾನೆ ಆಯ್ಕೆ ಮಾಡಿ ಕೂರಿಸಿರುವ ಚುನಾವಣಾ ಆಯೋಗ ಬಳಸಿಕೊಂಡು ಮತ ಎಣಿಕೆಯಲ್ಲಿ ವಂಚನೆ ಗೈಯ್ಯುವ ಮತ್ತು ಜನಾದೇಶವನ್ನು ಪಾಲಿಸದಿರುವ, ಆಪರೇಷನ್ ಕಮಲದಂತಹ ತುಚ್ಛ ಮಾರ್ಗಗಳ ಮೂಲಕ ಅಧಿಕಾರ ತಮ್ಮ ಕಪಿಮುಷ್ಟಿಯ್ಲಲ್ಲೇ ಇಟ್ಟುಕೊಳ್ಳಲು ಎಲ್ಲ ಪ್ರಯತ್ನ ಮಾಡಲಿದೆ ಎಂದು ಅಶೋಕ್ ಅಭಿಪ್ರಾಯಪಟ್ಟರು.
ಇದನ್ನು ತಡೆಯಲು ನಾಗರೀಕರಾಗಿ ನಾವೂ ಧೃಡ ಸಂಕಲ್ಪ ಮಾಡಿದ್ದೇವೆ. ನಾವು ಯಾವುದೇ ರೀತಿಯ ಕಪಟ ಸಂಖ್ಯೆಯನ್ನು ಹಾಗೂ ಕಪಟ ಮಾರ್ಗದ ಸರಕಾರ ರಚನೆ ಸ್ವೀಕರಿಸಲು ಸಾಧ್ಯವಿಲ್ಲ. ನಾವಿದನ್ನು ತಡೆಯಲು ಎಲ್ಲ ಕ್ರಮ ತೆಗೆದುಕೊಳ್ಳುತ್ತೇವೆ. ನಿಸ್ಪಕ್ಷಪಾತ ಮತ ಎಣಿಕೆಗಾಗಿ ಆಡಳಿತಾಂಗದ ಮೇಲೆ ಒತ್ತಡ ಹಾಕುವ ಕೆಲಸ ಪ್ರಾರಂಭವಾಗಿದೆ. ಎಲ್ಲ ಚುನಾವಣಾ ಅಧಿಕಾರಿಗಳಿಗೂ ಪತ್ರ ನೀಡಿ ಮನವಿ ಮಾಡಿಕೊಳ್ಳಲಾಗಿದೆ. ರಾಷ್ಟ್ರಪತಿ ಹಾಗೂ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಿಗೂ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕದ ಮತ್ತು ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಜಾಗೃತ ಮತದಾರರ ಕಾರ್ಯಪಡೆಗಳನ್ನು ರಚಿಸುತ್ತಿದ್ದೇವೆ. ಮತ ಎಣಿಕೆ ಕ್ಷೇತ್ರಗಳ ಬಳಿ ನಾವು ‘ನಿಷ್ಪಕ್ಷಪಾತ ಮತ ಎಣಿಕೆ ನಡೆಯಲಿ–ಜನಾದೇಶವೆ ಜಾರಿಗೆ ಬರಲಿ’ ಎಂಬ ಫಲಕಗಳ ಜೊತೆ ಕಣ್ಗಾವಲನ್ನು ಏರ್ಪಡಿಸಲಾಗುವುದು. ಯಾವುದೇ ಮೋಸಗಳು ನಡೆದರೂ ಅದರ ವಿರುದ್ಧ ದನಿ ಎತ್ತಲಾಗುವುದು ಮತ್ತು ಪ್ರತಿಭಟಿಸಲಾಗುವುದು ಎಂದು ಅಶೋಕ್ ತಿಳಿಸಿದರು.
ಇದುವರೆಗೆ ಸಂಗ್ರಹಿಸಿರುವ ಗ್ರೌಂಡ್ ಮಾಹಿತಿ ಪ್ರಕಾರ, ಬಹುಮತ ಎರಡೂ ಬಣಕ್ಕೂ ಸಿಗುವುದಿಲ್ಲ. ಆದರೆ ‘ಇಂಡಿಯಾ’ ಮೈತ್ರಿಯು ‘ಎನ್‌ಡಿಎ’ಗಿಂತ ಹೆಚ್ಚಿನ ಸೀಟುಗಳನ್ನು ಹೊಂದಿರಲಿದೆ. ಹೀಗಾದಲ್ಲಿ ಬಿಜೆಪಿ ತನ್ನ ಸೋಲನ್ನು ಒಪ್ಪಿಕೊಳ್ಳಬೇಕು. ಇಂಡಿಯಾ ಬಣಕ್ಕೆ ಸರಕಾರ ರಚಿಸಲು ಅವಕಾಶ ಮಾಡಿಕೊಡ ಬೇಕು. ಹಾಗೆ ಮಾಡದೆ ಅನ್ಯ ಮಾರ್ಗಗಳ ಮೂಲಕ ಸರಕಾರ ರಚಿಸಲು ಪ್ರಯತ್ನಿಸಿದರೆ, ದೇಶವ್ಯಾಪಿ ಜನ ಪ್ರತಿರೋಧವನ್ನು ಎದುರಿ ಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಯಾರೆ ಅಧಿಕಾರಕ್ಕೆ ಬಂದರೂ ಜನಪರ ನೀತಿಗಳಿಗಾಗಿ, ಸಂವಿಧಾನದ ಮೌಲ್ಯಗಳ ಮರುಸ್ಥಾಪನೆಗಾಗಿ ನಾವು ರಚನಾತ್ಮಕ ವಿರೋಧ ಪಕ್ಷದ ರೀತಿಯಲ್ಲಿ ಕೆಲಸ ಮಾಡಲಿದ್ದೇವೆ. ಜನ ಎಚ್ಚೆತ್ತಿದ್ದಾರೆ, ಹೊಸ ರೀತಿಯ ಜನ ರಾಜಕಾರಣವನ್ನು ದೇಶ ಭವಿಷ್ಯದಲ್ಲಿ ನೋಡಲಿದೆ. ಸಂವಿಧಾನವು ಆಶಿಸುವಂತೆ, ‘ಭಾರತದ ಪ್ರಜೆಗಳಾದ ನಾವು’ ಸಬಲರಾಗಿದ್ದೇವೆ ಮತ್ತು ನಮ್ಮ ಇಚ್ಛೆಯೆ ಜನತಂತ್ರದ ಫಲಿತವಾಗುವುದನ್ನು ಖಾತ್ರಿ ಪಡಿಸುತ್ತೇವೆ ಎಂದು ಅಶೋಕ್ ನುಡಿದರು.
ಎಲ್.ಎನ್.ಮುಕುಂದರಾಜ್ ಮಾನನಾಡಿ, 2024ರ ಲೋಕಸಭೆ ಚುನಾವಣೆ ಬಹಳ ಮುಖ್ಯವಾದ ಚುನಾವಣೆ ಆಗಿದೆ. ಅತ್ಯಂತ ಕೆಟ್ಟದಾಗಿ ಹತ್ತು ವರ್ಷ ಆಡಳಿತ ನಡೆಸಿದ ಕೋಮುವಾದ ಸರಕಾರದ ವಿರುದ್ಧ ಜನಾಕ್ರೋಶ ಸೃಷ್ಠಿಯಾಗಿದೆ. 2019ರಲ್ಲಿ ಜನ ಕುರುಡು ಭಕ್ತರಾಗಿ ಚುನಾವಣೆಯಲ್ಲಿ ಬಿಜೆಪಿಯನ್ನು ಆಯ್ಕೆ ಮಾಡಿದ್ದರು. ಆದರೆ ಈ ಬಾರಿ ಜನ ತುಂಬಾ ಪ್ರಜ್ಞಾವಂತಿಕೆಯಿಂದ ಮತ ಚಲಾವಣೆ ಮಾಡಿದ್ದಾರೆ ಎಂದರು.
ದೇಶದ ಜನರ ಪ್ರಜ್ಞೆ ಎಚ್ಚರದಲ್ಲಿದೆ. 77ರ ಚುನಾವಣೆಯ ನಂತರ ನಡೆಯುತ್ತಿರುವ ಅತ್ಯಂತ ಆತಂಕದ ಮತ್ತು ಕುತೂಹಲದ ಚುನಾವಣೆ ಆಗಿದೆ. ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಗೆಲ್ಲಲೇ ಬೇಕು, ಗೆಲ್ಲುತ್ತೆ. ಸಂವಿಧಾನ ಉಳಿಯಲೇ ಬೇಕು ಉಳಿಯುತ್ತೆ. ಆದರೆ ಚುನಾವಣೆಯ ನಂತರ ಮತ ಎಣಿಕೆ, ಅಧಿಕಾರ ಹಸ್ತಾಂತರ ಮಾಡದೆ, ಹಠಮಾರಿ ಪಕ್ಷ ನಾನಾ ರೀತಿಯ ತಂತ್ರಗಳನ್ನು ಬಳಸುವ ಸಾಧ್ಯತೆ ಇದೆ ಎಂದು ಹೇಳಿದರು.
ಚುನಾವಣಾ ಆಯೋಗ, ಇವಿಯಂ ಅವರ ಕೈಯಲ್ಲಿದೆ. ಇವೆಲ್ಲವೂ ಇದ್ದೂ ಅವರು ಸೋತಿದ್ದಾರೆಂದರೂ ಅಧಿಕಾರವನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಆದುದರಿಂದ ಇಂಡಿಯಾ ಒಕ್ಕೂಟದಲ್ಲಿರುವ ಪಕ್ಷಗಳು ಬಹಳ ಎಚ್ಚರದಿಂದ ಇರಬೇಕು ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವಂತಹ ಕೆಲಸ ಮಾಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎದ್ದೇಳು ದಸಂಸ ಸಂಸ್ಥಾಪಕ ಎನ್.ವೆಂಕಟೇಶ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಹಿರಿಯ ಸಾಹಿತಿ ಎಲ್.ಎನ್.ಮುಕುಂದರಾಜ್, ಎದ್ದೇಳು ಕರ್ನಾಟಕ ಸದಸ್ಯ ಫಾ.ಮನೋಹರ್‌ಚಂದ್ರ ಪ್ರಸಾದ್, ತಾರಾರಾವ್, ಮುಸ್ಲಿಂ ಮುತ್ತಯಿದಾ ಮಹಾಜ್‌ನ ಇಜಾಝ್ ಅಹ್ಮದ್ ಬುಖಾರಿ, ಅಂತರಾಷ್ಟ್ರೀಯ ಪರಿಸರವಾದಿ ಹೋರಾಟಗಾರ್ತಿ ತಾರಾರಾವ್, ಗೌರಿ ಕರ್ನಾಟಕ ಜನಶಕ್ತಿ ಸದಸ್ಯೆ ಉಪಸ್ಥಿತರಿದ್ದರು.