ದೇವೇಗೌಡರ ಮೇಲೆ ಗೌರವವಿದ್ದರೆ ದೇಶಕ್ಕೆ ವಾಪಸ್ ಬಂದು ತನಿಖೆಗೆ ಸಹಕರಿಸು : ಪ್ರಜ್ವಲ್‍ಗೆ ಕುಮಾರಸ್ವಾಮಿ ಮನವಿ
ಬೆಂಗಳೂರು : ದೇವೇಗೌಡರು ತಮ್ಮ ಇಡೀ ರಾಜಕೀಯ ಬದುಕನ್ನು ಪ್ರಜ್ವಲ್ ಬೆಳೆಯಬೇಕು ಎಂದು ಧಾರೆ ಎರೆದಿದ್ದಾರೆ. ಪ್ರಜ್ವಲ್ ನೀನು ಎಲ್ಲೇ ಇದ್ದರೂ ಮುಂದಿನ 24 ಅಥವಾ 48 ಗಂಟೆಯೊಳಗೆ ದೇಶಕ್ಕೆ ವಾಪಸ್ ಬಂದು ತನಿಖೆಗೆ ಸಹಕರಿಸುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ಮತ್ತು ಎಚ್.ಡಿ. ದೇವೇಗೌಡರಿಗೆ ಗೌರವ ತಂದುಕೊಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಸೋಮವಾರ ನಗರದ ಜೆ.ಪಿ.ಭವನದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಈ ನೆಲದ ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ನನ್ನ ಕಾರ್ಯಕರ್ತರು ಪಕ್ಷವನ್ನು ಉಳಿಸಿ ಬೆಳೆಸಿದ್ದಾರೆ. ಅವರ ದುಡಿಮೆಯಿಂದ ನಾವು ನಿಮ್ಮ ಮುಂದೆ ಕೂತು ಮಾತನಾಡುತ್ತಿದ್ದೇವೆ. ಈ ನಾಡಿನ ಲಕ್ಷಾಂತರ ಜನರ ಆಶೀರ್ವಾದದಿಂದ ಇಲ್ಲಿಯವರೆಗೆ ಬೆಳೆದಿದ್ದೇವೆ. ದೇಶಕ್ಕೆ ವಾಪಸ್ ಬಂದು ತನಿಖೆಗೆ ಸಹಕಾರ ಕೊಡಬೇಕು ಎಂದು ಪ್ರಜ್ವಲ್ ರೇವಣ್ಣಗೆ ಕೈ ಜೋಡಿಸಿ ಮಾಧ್ಯಮಗಳ ಮೂಲಕ ಮನವಿ ಮಾಡುತ್ತೇನೆ ಎಂದರು.
ಇನ್ನೆಷ್ಟು ದಿನ ಕಳ್ಳ ಪೊಲೀಸ್ ಆಟ. ಅವಶ್ಯಕತೆ ಇದೆಯಾ?, ನಾನು ನನ್ನ ತಂದೆಯವರ ಮೂಲಕ ಮನವಿ ಮಾಡಿಸಬೇಕು ಅಂದುಕೊಂಡಿದ್ದೆ, ಆದರೆ, ತಡೆಯಲಾರದೇ ನಾನೇ ಮಾಧ್ಯಮಗಳ ಮುಂದೆ ಮನವಿ ಮಾಡುತ್ತಿದ್ದೇನೆ. ರೇವಣ್ಣ ಬೇಲ್ ಮೇಲೆ ಹೊರ ಬಂದ ಮೇಲೆ ಎರಡು ಸಲ ಭೇಟಿ ಮಾಡಿದ್ದೀನಿ. ಪ್ರಜ್ವಲ್ ಎಲ್ಲೇ ಇದ್ದರೂ ಕರೆಸು ಅಂತ ನಾನು ರೇವಣ್ಣಗೂ ಹೇಳಿದ್ದೀನಿ ಎಂದು ಅವರು ಹೇಳಿದರು.
ಪದ್ಮನಾಭನಗರಕ್ಕೆ ನಾನು ಪ್ರಜ್ವಲ್‍ನನ್ನು ಬಿಡಿಸಲು ತಂದೆ ಜೊತೆ ಮಾತನಾಡಲು ಹೋಗಿಲ್ಲ. ತಂದೆ-ತಾಯಿ ಅವರ ಆರೋಗ್ಯ ವಿಚಾರಿಸಲು ಮತ್ತು ಧೈರ್ಯ ಹೇಳಲು ಹೋಗುತ್ತೇನೆ. ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣವು ಎಲ್ಲರೂ ತಲೆತಗ್ಗಿಸುವ ಪ್ರಕರಣವಾಗಿದೆ. ಹಾಗಾಗಿ ನಾನು ಸಾರ್ವಜನಿಕವಾಗಿ ಮತ್ತೊಮ್ಮೆ ಕ್ಷಮೆ ಕೋರುತ್ತೇನೆ. ಎಲ್ಲರೂ ಅಸಹ್ಯ ಪಡುವ ಪ್ರಕರಣ ಇದಾಗಿದೆ. ಆದರೆ, ಈ ಪ್ರಕರಣದಲ್ಲಿ ಕಿಂಚಿತ್ತೂ ಪಾಲೇ ಇಲ್ಲದ ನನ್ನ ಹಾಗೂ ದೇವೇಗೌಡರನ್ನು ತಾಳೆ ಹಾಕಿದ್ದಾರೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
‘ಪ್ರಜ್ವಲ್ ಮೇಲೆ ಆರೋಪ ಕೇಳಿಬಂದ ಕೂಡಲೇ ಬಹಳಷ್ಟು ನೊಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯಸಭೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾಗಿದ್ದರು. ರಾಜ್ಯದ ಹಿತಕ್ಕಾಗಿ ನೀವು ರಾಜ್ಯಸಭೆಯಲ್ಲಿ ಇರಬೇಕು ಎಂದು ಅವರ ಮನವೊಲಿಸಿದ್ದೇನೆ. ಈ ಘಟನೆಯಿಂದ ನಮ್ಮ ತಂದೆ ತುಂಬಾ ನೊಂದಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ, ಸಾ.ರಾ.ಮಹೇಶ್, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಉಪಸ್ಥಿರಿದ್ದರು.