ಕೇಂದ್ರದ ವಿರುದ್ಧದ ನಿರ್ಣಯಕ್ಕೆ ಬಿಜೆಪಿ ಬೆಂಬಲ ನೀಡಲಿ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ನಮ್ಮ ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಆಗಿರುವ ಅನ್ಯಾಯದ ವಿರುದ್ಧ ನಿರ್ಣಯ ಮಂಡಿಸಿದ್ದೇವೆ. ಬಿಜೆಪಿಯವರು ರಾಜ್ಯದ ಬೆಂಬಲಕ್ಕೆ ನಿಲ್ಲಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತೆರಿಗೆ ನಮ್ಮ ಹಕ್ಕು, ನಮ್ಮ ಪಾಲಿಗಾಗಿ ಹೋರಾಟ ಮಾಡುತ್ತಿದ್ದೇವೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ನಿರ್ಣಯ ಮಂಡಿಸಿ ಸದನದಲ್ಲಿ ಅಂಗೀಕಾರ ಮಾಡಲಾಗಿದೆ. ಇದನ್ನು ಕೇಂದ್ರಕ್ಕೆ ಕಳುಹಿಸಲು ತೀರ್ಮಾನ ಮಾಡಿದ್ದೇವೆ. ಆದರೆ ಬಿಜೆಪಿಯವರು ರಾಜ್ಯದ ಬೆಂಬಲಕ್ಕೆ ಬಂದಿಲ್ಲ ಎಂದರು.
ನಾವು ಕಾನೂನು ಚೌಕಟ್ಟಿನಲ್ಲೆ ನಿರ್ಣಯ ಮಂಡಿಸಿದ್ದೇವೆ. ಇದೇ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ, ಸಿದ್ದರಾಮಯ್ಯ ಮತ್ತು ಕೃಷ್ಣಬೈರೇಗೌಡ ಮಾಡಿದ ಪ್ರಸ್ತಾವನೆಗೆ ಉತ್ತರ ಕೊಡುತ್ತಾ ನಾವೆಲ್ಲಾ ಸೇರಿ ಒಟ್ಟಿಗೆ ಹೋರಾಟ ಮಾಡಬೇಕು ಎಂದು ಕರೆ ನೀಡಿದ್ದರು. ಅವರ ಮಾತಿನಂತೆ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ನೋವನ್ನು ಹೇಳಿದ್ದೇವೆ ಎಂದು ಅವರು ಹೇಳಿದರು.
ಬಿಜೆಪಿ, ಜೆಡಿಎಸ್ ಚರ್ಚೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ: ರಾಜ್ಯಸಭೆ ಚುನಾವಣೆ ಸಂಬಂಧ ಎಚ್.ಡಿ.ಕುಮಾರಸ್ವಾಮಿ ಮತ್ತು ಅಮಿತ್ ಶಾ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಬ್ಬರೂ ಏನೇನು ಚರ್ಚೆ ಮಾಡಿದ್ದಾರೆ ಎನ್ನುವ ಅರಿವು ನಮಗಿದೆ. ಯಾವ, ಯಾವ ಶಾಸಕರಿಗೆ ದೂರವಾಣಿ ಕರೆ ಮಾಡಿ ಏನೇನು ಮಾತನಾಡಿದ್ದಾರೆ ಎನ್ನುವುದು ಗೊತ್ತಿದೆ ಎಂದರು.
ಶಾಸಕರ ಸಂಬಂಧಿಕರು, ಸ್ನೇಹಿತರ ಮೂಲಕ ಏನೇನು ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ನಮಗೆ ತಿಳಿದಿದೆ. ನಮ್ಮ ಬತ್ತಳಿಕೆಯಲ್ಲಿ ಏನಿದೆ ಎನ್ನುವುದು ಅವರಿಗೆ ಗೊತ್ತಿದೆ. ಅವರ ಬತ್ತಳಿಕೆಯಲ್ಲಿ ಏನಿದೆ ಎನ್ನುವುದು ನಮಗೆ ಗೊತ್ತಿದೆ. ಈ ವಿಚಾರಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲರ ಮೇಲೆ ನಾವು ನಿಗಾವಿಟ್ಟಿದ್ದೇವೆ ಎಂದು ಅವರು ತಿಳಿಸಿದರು.
ಇತರೆ ಪಕ್ಷದವರು ನಮ್ಮ ಸಂಪರ್ಕದಲ್ಲಿ ಇದ್ದಾರೆ: ಕಾಂಗ್ರೆಸ್ ಶಾಸಕರಿಗೆ ದಿಲ್ಲಿಯಿಂದ ಕರೆ ಬಂದಿದೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, 138 ಜನ ಶಾಸಕರು ನಮ್ಮ ಜೊತೆ ಇದ್ದಾರೆ. ಜನಾದರ್ದನ ರೆಡ್ಡಿ ಬಳಿಯೂ ಮತ ಹಾಕುವಂತೆ ಮನವಿ ಮಾಡುತ್ತೇನೆ. ಅಧಿವೇಶನ ಮುಗಿದ ನಂತರ ಖಾಸಗಿ ಹೊಟೇಲ್‍ನಲ್ಲಿ ಶಾಸಕಾಂಗ ಪಕ್ಷದ ಸಭೆ ಇದೆ. ಅಲ್ಲಿ ಅಣಕು ಮತದಾನ ನಡೆಸುತ್ತೇವೆ ಎಂದರು.
ನಮ್ಮ ಬಳಿ ಹೆಚ್ಚುವರಿ ಮತಗಳಿವೆ. ನಮ್ಮ ಮನೆಯನ್ನು ಎಷ್ಟು ಬಿಗಿ ಮಾಡಿಕೊಳ್ಳಬೇಕೊ ಅದನ್ನು ಮಾಡುತ್ತೇವೆ. ಇತರೆ ಪಕ್ಷದವರು ನಮ್ಮ ಜೊತೆ ಸಂಪರ್ಕದಲ್ಲಿ ಇದ್ದಾರೆ, ಅದನ್ನು ಬಹಿರಂಗಗೊಳಿಸುವುದಿಲ್ಲ. ಅವರ ಜೀವನ ಹಾಳು ಮಾಡಲು ನನಗೆ ಇಷ್ಟವಿಲ್ಲ ಎಂದು ಅವರು ತಿಳಿಸಿದರು.