ಎಲ್ಲರೂ ಸೇರಿ ಬೆಂಗಳೂರನ್ನು ಕಟ್ಟೋಣ: ಸರ್ವ ಪಕ್ಷಗಳ ಜನಪ್ರತಿನಿಧಿಗಳ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ

Update: 2024-07-27 15:35 GMT

ಬೆಂಗಳೂರು: ರಾಜಕೀಯವನ್ನು ಬೂತ್ ಮಟ್ಟದಲ್ಲಿ ಮಾಡೋಣ, ಈಗ ಎಲ್ಲ ಪಕ್ಷದ ನಾಯಕರು ಸೇರಿ ಬೆಂಗಳೂರನ್ನು ಕಟ್ಟೋಣ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ‘ನಾಗರಿಕರ ಧ್ವನಿ-ಅದೇ ಸರಕಾರದ ಧ್ವನಿ’ ಎಂಬ ಪರಿಕಲ್ಪನೆಯಡಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ವಿವಿಧ ಯೋಜನೆಗಳ ಬಗ್ಗೆ ಬೆಂಗಳೂರಿನ ಸರ್ವ ಪಕ್ಷಗಳ ಶಾಸಕರು ಹಾಗೂ ಜನಪ್ರತಿನಿಧಿಗಳ ಸಭೆಯನ್ನು ನಡೆಸಲಾಯಿತು.

ಈ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಕುಮಾರ್, ಗ್ರೇಟರ್ ಬೆಂಗಳೂರು ವಿಚಾರವಾಗಿ ಅಶ್ವಥ್ ನಾರಾಯಣ ಗಾಬರಿಯಾಗುವುದು ಬೇಡ, ವಿಧೇಯಕದ ಸಂಪೂರ್ಣ ಮಾಹಿತಿ ನಿಮ್ಮ ಕೈಯಲ್ಲಿದೆ. ಪ್ರತಿ ಪದವನ್ನೂ ಪರಿಶೀಲಿಸಿ. ಬೆಂಗಳೂರಿನ ಭವಿಷ್ಯದ ಹಿತ ಕಾಯಲು ಅಗತ್ಯವಾದ ಎಲ್ಲ ಕ್ರಮಗಳನ್ನು ಗ್ರೇಟರ್ ಬೆಂಗಳೂರಿನಲ್ಲಿ ಕೈಗೊಂಡಿದ್ದೇವೆ. ನೀವು ಚರ್ಚೆ ಮಾಡಿ, ನಿಮ್ಮ ಸಲಹೆ ಸೂಚನೆ ಪರಿಗಣಿಸುತ್ತೇವೆ. ನಿಮ್ಮೆಲ್ಲರ ಒತ್ತಾಯದಂತೆ ಗ್ರೇಟರ್ ಬೆಂಗಳೂರು ವಿಚಾರವಾಗಿ ಸದನ ಸಮಿತಿ ರಚಿಸಲು ತೀರ್ಮಾನಿಸಿದ್ದೇವೆ ಎಂದರು.

ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಬಹಳ ಸವಾಲಿನ ಇಲಾಖೆ. ಬೆಂಗಳೂರಿನ ಸಮಸ್ಯೆಗಳಿಗೆ ಹೊಸ ರೂಪ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಕೇಂಪೇಗೌಡರು ಬೆಂಗಳೂರನ್ನು ಕಟ್ಟಿದರು. ಕೆಂಗಲ್ ಹನುಮಂತಯ್ಯನವರು ಇಲ್ಲಿ ವಿಧಾನಸೌಧ ಕಟ್ಟಿಸಿದರು. ಎಸ್.ಎಂ.ಕೃಷ್ಣ ಅವರು ಇದನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋದರು. ಬೆಂಗಳೂರು ಯೋಜಿತ ನಗರವಲ್ಲ. ನಾನು ಈ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಈಗ ಅದು 1.40 ಕೋಟಿಗೆ ಏರಿಕೆಯಾಗಿದೆ. 1.04 ಕೋಟಿ ವಾಹನಗಳಿವೆ. ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಇಲ್ಲಿರುವ ತಂತ್ರಜ್ಞಾನ, ಮಾನವ ಸಂಪನ್ಮೂಲ, ಹವಾಮಾನ, ಸಂಸ್ಕೃತಿ ನೋಡಿ ಇಲ್ಲಿಗೆ ಬಂದವರು ಮತ್ತೆ ವಾಪಸ್ ಹೋಗುತ್ತಿಲ್ಲ. ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ ಬಂದವರು ಇಲ್ಲೇ ಉಳಿದುಕೊಂಡಿದ್ದಾರೆ. ಬೆಂಗಳೂರು ಅನಿಯಂತ್ರಿತವಾಗಿ ಬೆಳೆಯುತ್ತಿದೆ. ಬಿಜೆಪಿ ಸರಕಾರ 110 ಹಳ್ಳಿಗಳನ್ನು ಬೆಂಗಳೂರಿನ ವ್ಯಾಪ್ತಿಗೆ ಸೇರಿಸಿದ್ದು, ಇಲ್ಲಿಯವರೆಗೂ ಆ ಭಾಗಕ್ಕೆ ಮೂಲಸೌಕರ್ಯ ಒದಗಿಸಿಕೊಡಲು ಸಾಧ್ಯವಾಗಿಲ್ಲ. ಇದರ ಬಗ್ಗೆ ಪ್ರಯತ್ನ ಮಾಡುತ್ತಿದ್ದೇವೆ. ಕಾವೇರಿ ನೀರಿನ ಸಮಸ್ಯೆ ಒಂದೆಡೆಯಾದರೆ, ಕಳೆದ ಬೇಸಿಗೆಯಲ್ಲಿ ನಗರದ 7 ಸಾವಿರ ಕೊಳವೆಬಾವಿ ಬರಿದಾಗಿ ಸಮಸ್ಯೆ ಉದ್ಭವಿಸಿತ್ತು. ಕೆರೆಗಳನ್ನು ಉಳಿಸಿ ಜೀವಂತವಾಗಿರಿಸಿಕೊಳ್ಳಬೇಕು. ಇದಕ್ಕಾಗಿ ಏನು ಮಾಡಬೇಕು ಚರ್ಚೆ ಮಾಡಲಾಗುತ್ತಿದೆ. ಅಂತರ್ಜಲ ಹೆಚ್ಚಿಸದಿದ್ದರೆ ಪರ್ಯಾಯ ಅವಕಾಶವಿಲ್ಲ ಎಂದು ಅವರು ಹೇಳಿದರು.

ಕಸ ಹಾಗೂ ಸಂಚಾರ ದಟ್ಟಣೆ ಸಮಸ್ಯೆ ವಿಚಾರವಾಗಿ ಸುಮಾರು 70 ಸಾವಿರ ಸಲಹೆಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗಿದೆ. ಇವುಗಳನ್ನು ಪರಿಶೀಲಿಸಿದ್ದೇವೆ. ಬೆಂಗಳೂರಿನ ಎಲ್ಲ ಇಲಾಖೆಗಳಲ್ಲಿ ಪಾರದರ್ಶಕವಾಗಿ ಕೆಲಸ ಮಾಡಲಾಗುತ್ತಿದೆ. ಕಾನೂನು ಚೌಕಟ್ಟಿನ ಆಚೆಗೆ ಯಾವುದೇ ಕೆಲಸ ಮಾಡುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಎಲ್ಲ ಪ್ರಕ್ರಿಯೆ ನಡೆಯಬೇಕು. ನಾನು ತಪ್ಪು ಮಾಡಲು ಹೋದರೂ ನನಗೆ ಎಚ್ಚರಿಕೆ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಟಿಡಿಆರ್ ವಿಚಾರವಾಗಿ ದೊಡ್ಡ ಹಗರಣವಾಗಿದೆ. ಅವುಗಳನ್ನು ಬಗೆಹರಿಸಲು ಹೊಸ ವ್ಯವಸ್ಥೆ ತರಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಇದಕ್ಕೂ ಮುನ್ನ ಬ್ರ್ಯಾಂಡ್ ಬೆಂಗಳೂರು ಕುರಿತ ಕಿರುಹೊತ್ತಿಗೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಬಿಡುಗಡೆಗೊಳಿಸಿದರು. ಸಭೆಯಲ್ಲಿ ಶಾಸಕರಾದ ಎನ್.ಎ.ಹಾರಿಸ್, ಎಸ್.ಆರ್.ವಿಶ್ವನಾಥ್, ಎ.ಸಿ. ಶ್ರೀನಿವಾಸ್, ಕೆ.ಗೋಪಾಲಯ್ಯ, ಬಿ.ಶಿವಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News